ಮಂಗಳೂರು: ಹೊಸ ವರ್ಷದ ಶುಭಾಶಯ ಕೋರುವ ಸಂದರ್ಭವನ್ನು ಬಳಸಿ ಸೈಬರ್ ಖದೀಮರು ಹಾನಿಕಾರಕ ಲಿಂಕ್ ಹಾಗೂ APK ಫೈಲ್‌ಗಳನ್ನು ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಹೊಸವರ್ಷದ ಶುಭಾಶಯ ಕೋರುವ APK ಫೈಲ್, ಲಿಂಕ್‌ಗಳನ್ನು ತೆರೆಯದಿರಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
2025ನೇ ಹೊಸವರ್ಷದ ಸಂದರ್ಭವನ್ನು ಬಳಸಿಕೊಂಡು ಸೈಬರ್ ಕ್ರಿಮಿನಲ್‌ಗಳು ಸಾರ್ವಜನಿಕರ ಮೊಬೈಲ್‌ಗಳಿಗೆ ಹಾನಿಕಾರಕ ಲಿಂಕ್ ಮತು APK ಫೈಲ್‌ಗಳನ್ನು ಕಳುಹಿಸಿ, ಸಾರ್ವಜನಿಕರ ಮೊಬೈಲ್‌ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ಬಳಿಕ ಹ್ಯಾಕ್ ಮಾಡಿದ ಮೊಬೈಲಿನಿಂದ ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು APK ಫೈಲ್‌ಗಳನ್ನು ದೊಡ್ಡಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಮೊಬೈಲ್‌ಗಳಿಗೆ ಹೊಸ ವರ್ಷದ ಶುಭಾಶಯ ಕೋರಿ ಬರುವ ಯಾವುದೇ ಹಾನಿಕಾರಕ ಲಿಂಕ್‌ಗಳು ಮತ್ತು APK ಫೈಲ್‌ಗಳನ್ನು ತಕ್ಷಣ ಡಿಲೀಟ್ ಮಾಡಬೇಕು. ಯಾವುದೇ ಕಾರಣಕ್ಕೂ ಈ ಹಾನಿಕರ ಲಿಂಕ್ ಮತ್ತು APK ಫೈಲ್ ಗಳನ್ನು ಯಾರಿಗೂ ಶೇರ್ ಮಾಡದಿರಿ. ಇಂತಹ ಲಿಂಕ್ ಮತ್ತು APK ಫೈಲ್‌ಗಳನ್ನು ಯಾವುದಾದರೂ ವಾಟ್ಸ್ಆ್ಯಪ್ ಗ್ರೂಪ್‌ಗಳಿಗೆ ಪರಿಚಿತ ವಾಟ್ಸ್ಆ್ಯಪ್ ಸಂಖ್ಯೆಯಿಂದಲೇ ಬಂದಲ್ಲಿ ಗ್ರೂಪ್ ಅಡ್ಮಿನ್‌ಗಳು ಅಂತಹ ಲಿಂಕ್ ಮತ್ತು APK ಫೈಲ್‌ಗಳನ್ನು ಪರಿಶೀಲನೆ ಮಾಡಿ ಡಿಲೀಟ್ ಮಾಡುವಂತೆ ಕಮಿಷನರ್ ತಿಳಿಸಿದ್ದಾರೆ.
ಅಲ್ಲದೇ ಯಾವುದೇ ಸೈಬರ್ ಕ್ರೈಂ ಅಪರಾಧಕ್ಕೆ ಒಳಗಾದಲ್ಲಿ ಕೂಡಲೇ 1930ಕ್ಕೆ ಕರೆ ಮಾಡಿ ಅಥವಾ www.cybercrime.gov.in ಈ ವೆಬ್‌ಸೈಟ್‌ನಲ್ಲಿ ದೂರನ್ನು ದಾಖಲಿಸುವಂತೆಯೂ ಅವರು ಸೂಚಿಸಿದ್ದಾರೆ.
ಅಪರಿಚಿತ APK ಫೈಲ್‌ಗಳ ಮೂಲಕ ಸೈಬರ್ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿ, ಫೋಟೋ, ವಿಡಿಯೋಗಳನ್ನು, ಬ್ಯಾಂಕ್ OTP-ಗಳನ್ನು ಕದಿಯುವ ಅಪಾಯ ಹೆಚ್ಚು. ಇತ್ತೀಚೆಗೆ ಅಪರಿಚಿತ APK ಫೈಲ್‌ಗಳನ್ನು ಇನ್‌ಸ್ಟಾಲ್ ಮಾಡಿಸಿ ವಂಚನೆ ಮಾಡುವ ಪ್ರಕರಣಗಳು ವರದಿಯಾಗುತ್ತಿವೆ. ಈ ಅಪರಿಚಿತ APK ಫೈಲ್‌ಗಳ ಬಳಕೆ ಮತ್ತು ಅವುಗಳಿಂದ ಉಂಟಾಗುವ ಅಪಾಯದ ಕುರಿತು ಸಾರ್ವಜನಿಕರು ಎಚ್ಚರ ವಹಿಸಬೇಕು. ಅನಧಿಕೃತ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ಇನ್‌ಸ್ಟಾಲ್ ಮಾಡುವುದು ದೊಡ್ಡ ಅಪಾಯವನ್ನು ಉಂಟುಮಾಡುತ್ತದೆ. ಇವುಗಳಲ್ಲಿ ಹಾನಿಕಾರಕ ಮಾಲ್‌ವೇರ್ ಅಥವಾ ಡೇಟಾ ಕದಿಯುವ ಕೋಡ್‌ಗಳು ಇರಬಹುದು. ಹಾಗಾಗಿ ಯಾರೂ ಅಪರಿಚಿತ ಎಪಿಕೆ ಫೈಲ್‌ಗಳನ್ನು ಡೌನ್‌ಲೋಡ್ ಅಥವಾ ಇನ್‌ಸ್ಟಾಲ್ ಮಾಡಬಾರದು. ಇದನ್ನು ತಪ್ಪಿಸಲು ಸರಿಯಾದ ಎಚ್ಚರಿಕೆಗಳು ಅಗತ್ಯ ಎನ್ನುತ್ತಾರೆ ಸೈಬರ್ ತಜ್ಞ ಅನಂತ ಪ್ರಭು.
ಇದನ್ನೂ ಓದಿ: ಅಪರಿಚಿತ APK ಫೈಲ್ ಕಳಿಸಿ ಮಂಗಳೂರಿಗನಿಗೆ ಹ್ಯಾಕ್, ವಂಚನೆ: ದೆಹಲಿಯಲ್ಲಿ ಆರೋಪಿ ಬಂಧನ - APK FILE CHEATING