ದಾವಣಗೆರೆ: ಸೇವಾ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸುತ್ತಿರುವ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೈಗೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಮುಂದುವರಿದಿದೆ. ಧರಣಿ ಆರಂಭವಾಗಿ ತಿಂಗಳುಗಳು ಕಳೆದರೂ ಕ್ರಮಕ್ಕೆ ಮುಂದಾಗದ ಸರ್ಕಾರದ ನಿರ್ಲಕ್ಷ್ಯಕ್ಕೆ ಅತಿಥಿ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇಂದು ಜಿಲ್ಲಾಧಿಕಾರಿ ಕಚೇರಿಯೆದುರು ಕೈಗೆ ಹಗ್ಗ ಕಟ್ಟಿ, ಕಿವಿಗೆ ಹೂವಿಟ್ಟುಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದಿಂದ ಈ ಹಿಂದೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಕಡಿಮೆ ವೇತನ, ಸೇವಾ ಭದ್ರತೆ ಇಲ್ಲ. ಸಮಯಕ್ಕೆ ಸರಿಯಾಗಿ ಗೌರವಧನ ಪಾವತಿ ವಿಳಂಬ ಮಾಡುವುದು, ಕಡಿಮೆ ಸಂಬಳದಲ್ಲಿ ಹೆಚ್ಚು ಗಂಟೆಗಳ ಕಾಲ ಬೋಧನೆ ಮಾಡಿದರೂ ಸರ್ಕಾರ ನಮ್ಮ ಸೇವೆಯನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಪ್ರತಿಭಟನಾನಿರತರು ದೂರಿದರು.
ರಾಜ್ಯದ 430 ಪದವಿ ಕಾಲೇಜುಗಳಲ್ಲಿ 12 ಸಾವಿರ ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಗಿಂತ ಹೆಚ್ಚು ಅತಿಥಿ ಉಪನ್ಯಾಸಕರೇ ಇದ್ದು ಅವರಿಗಿಂತ ಜಾಸ್ತಿ ಕೆಲಸ ಮಾಡುತ್ತಿದ್ದಾರೆ. ಆದರೆ ಅತಿಥಿ ಉಪನ್ಯಾಸಕರ ಸೇವೆಗೆ ತಕ್ಕ ಸಂಬಳ ನೀಡುತ್ತಿಲ್ಲ ಎಂದು ವಿವರಿಸಿದರು.
ಸೇವಾ ಕಾಯಮಾತಿ ಮಾಡಬೇಕೆನ್ನುವುದು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಬೋಧನೆ ಮಾಡುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರ ಒಕ್ಕೊರಲ ಕೂಗು. ಆದರೆ ಸರ್ಕಾರ ನಮ್ಮ ಬೇಡಿಕೆಗಳಿಗೆ ಮನ್ನಣೆ ನೀಡಿಲ್ಲ. ನಾವು ಮಾನಸಿಕವಾಗಿ, ದೈಹಿಕವಾಗಿ ತುಂಬಾ ಬೆಂದು ನೊಂದು ಹೋಗಿದ್ದೇವೆ. ವಿದ್ಯಾರ್ಥಿಗಳ ಜೀವನ ಬೆಳಗಿಸಿದರೂ ಸರ್ಕಾರ ನಮಗೆ ಸೇವಾ ಭದ್ರತೆ ನೀಡುತ್ತಿಲ್ಲ. ನಾವು ಜೀವ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದೇವೆ ಎಂದರು.
ಇದನ್ನೂಓದಿ: ಐಟಿ ವಲಯದ ನೇಮಕಾತಿ ಶೇ 8 ರಿಂದ 10ರಷ್ಟು ಹೆಚ್ಚಳ ಸಾಧ್ಯತೆ: ವರದಿ