ದಾವಣಗೆರೆ: ಮಧ್ಯಪ್ರದೇಶದಲ್ಲಿ ವಾಲ್ಮೀಕಿ ಜನಾಂಗದ ಇಬ್ಬರು ಮಕ್ಕಳ ಕೊಲೆ ಹಾಗೂ ವಿಜಾಪುರ ಜಿಲ್ಲೆಯ ದಲಿತ ಯುವತಿಯೊಬ್ಬಳ ಅತ್ಯಾಚಾರ ಮಾಡಿ ಕೊಲೆ ಮಾಡಿರೋ ರಾಕ್ಷಸಿ ಕೃತ್ಯ ಖಂಡಿಸಿ ದಾವಣಗೆರೆಯಲ್ಲಿ ಇಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಂತರ ಪ್ರತಿಭಟನೆ ನಡೆಸಿದರು. ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ನಿರಂತರವಾಗಿ ಒಂದಿಲ್ಲೊಂದು ಕಡೆ ಕೊಲೆ, ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿವೆ. ದಲಿತರು ಎಂದ ಮಾತ್ರಕ್ಕೆ ಅವರ ಮೇಲೆ ಈ ರೀತಿಯ ದೌರ್ಜನ್ಯ ನಡೆಸುತ್ತಿರುವುದು ಅಮಾನವಿಯ. ಈ ಕೂಡಲೇ ಸರ್ಕಾರ ಎಚ್ಚೆತ್ತು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅದಲ್ಲದೇ ಇತ್ತೀಚಿಗೆ ಪಾವಗಡ ತಾಲೂಕಿನಲ್ಲಿ ಸಂಸದರಿಗೆ ದಲಿತರೆಂಬ ಕಾರಣಕ್ಕೆ ಗ್ರಾಮ ಪ್ರವೇಶಿಸದಂತೆ ತಡೆಯಲಾಗಿತ್ತು. ಸಂಸದರಿಗೆ ಈ ರೀತಿ ಜಾತಿಯ ತೊಡಕಾದರೆ ಜನಸಾಮಾನ್ಯರ ಗತಿಯೇನು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಇಂತಹ ದೌರ್ಜನ್ಯದ ವಿರುದ್ಧ ಈ ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾದಿಕಾರಿಗಳಿಗೆ ಮನವಿ ಸಲ್ಲಿಸಿದರು.