ದಾವಣಗೆರೆ: ಪ್ರಾಥಮಿಕ ಹಂತದಲ್ಲಿ ಕೊರೊನಾ ಸಂಪೂರ್ಣ ಹೋಗುವವರೆಗೆ ಶಾಲೆ ಆರಂಭಿಸುವುದು ಬೇಡ ಎಂದು ಮಾಜಿ ಸಚಿವ ಬಸವರಾಜ್ ಹೊರಟ್ಟಿ ಮನವಿ ಮಾಡಿದ್ದಾರೆ.
ಮಾಧ್ಯಮದವರ ಜತೆ ಮಾತನಾಡಿದ ಅವರು, 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ತರಗತಿ ನಡೆಸಿ, ಇಲ್ಲದಿದ್ದರೆ ಶಿಕ್ಷಣ ಸಂಸ್ಥೆಯ ಜೊತೆಗಿನ ಒಡನಾಟ ಕಡಿಮೆಯಾಗುತ್ತದೆ. ನಾವು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಆದರೆ ಇದರಲ್ಲಿಯೂ ರಾಜಕೀಯ ಮಾಡಿದರೆ ನಾವೇನೂ ಮಾಡಲಿಕ್ಕಾಗುತ್ತದೆ ಎಂದರು.
ವಿದ್ಯಾಗಮ ತರಗತಿ ಸೇರಿದಂತೆ ಬೇರೆ ಬೇರೆ ಕಾರಣಗಳಿಂದ ಇದುವರೆಗೆ 72 ಶಿಕ್ಷಕರು ಮೃತಪಟ್ಟಿದ್ದಾರೆ. ಒಂದು ವರ್ಷ ತರಗತಿ ಇಲ್ಲದಿದ್ದರೆ ಏನೂ ಆಗಲ್ಲ. ಒಂದರಿಂದ 9ನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗುತ್ತದೆ. ನಮ್ಮ ಶಾಲೆಗೆ ಅನುಮತಿ ನೀಡಿದರೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೊರೊನಾ ಮಾರ್ಗಸೂಚಿಯನ್ವಯ ಹೇಗೆ ಪಾಠ ಪ್ರವಚನ ಮಾಡಬೇಕೆಂಬುದನ್ನು ತೋರಿಸುತ್ತೇವೆ. ಆದರೆ ಶಿಕ್ಷಣ ಸಚಿವರು, ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಪದವಿ ಕಾಲೇಜುಗಳನ್ನು ಆರಂಭಿಸುವುದಕ್ಕೆ ವಿರೋಧ ಇಲ್ಲ. ವಿದ್ಯಾರ್ಥಿಗಳು ಹೇಳಿದರೆ ಕೇಳುತ್ತಾರೆ. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿಗಳನ್ನು ನಡೆಸಬಹುದು. ಒಮ್ಮೆಲೆ ನೂರಾರು ವಿದ್ಯಾರ್ಥಿಗಳಿಗೆ ಪಾಠ ಮಾಡುವುದಕ್ಕಿಂತ ಬ್ಯಾಚ್ ಆಗಿ ವಿಂಗಡಿಸಿ ತರಗತಿ ನಡೆಸುವುದು ಸೂಕ್ತ ಎಂದ ಅವರು, ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹರಿಸುವಂತೆ ಸಿಎಂ ಬಳಿ ಮಾತನಾಡಿದ್ದೇನೆ. ಆದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.