ದಾವಣಗೆರೆ: ವೈದ್ಯರೊಬ್ಬರು ರಸ್ತೆಯಲ್ಲಿ ಬೈಕ್ನಿಂದ ಆಯತಪ್ಪಿ ಬಿದ್ದು ಗಾಯಗೊಂಡು ನರಳುತ್ತಿದ್ದ ಸವಾರನ ಪ್ರಾಣ ಉಳಿಸಿದ್ದಾರೆ. ಈ ಘಟನೆ ದಾವಣಗೆರೆ ತಾಲೂಕಿನ ಪವಾಡ ರಂಗವ್ವನಹಳ್ಳಿಯಲ್ಲಿ ನಡೆದಿದೆ. ಡಾ.ರವಿಕುಮಾರ್ ಎಂಬವರು ದ್ವಿಚಕ್ರ ವಾಹನ ಸವಾರನನ್ನು ರಕ್ಷಿಸಿ ಮಾನವೀಯತೆ ಮೆರೆದವರು.
ಪವಾಡ ರಂಗವ್ವನಹಳ್ಳಿಯ ಸಮೀಪ ದ್ವಿಚಕ್ರ ವಾಹನ ಸವಾರ ಹಾಗು ಪುತ್ರ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದರು. ಆನಗೋಡು ಹಾಗು ಅಣಜಿ ಗ್ರಾಮಗಳ ಮಾರ್ಗವಾಗಿ ಜಗಳೂರಿಗೆ ಹೊರಟಿದ್ದ ಡಾ.ರವಿಕುಮಾರ್ ಅವರು ಬೈಕ್ ಸ್ಕಿಡ್ ಆಗಿ ಬಿದ್ದು ನರಳಾಡುತ್ತಿದ್ದ ತಂದೆ ಮತ್ತು ಚಿಕ್ಕ ಮಗುವನ್ನು ಗಮನಿಸಿದ್ದಾರೆ. ತಕ್ಷಣ ತಮ್ಮ ಕಾರು ನಿಲ್ಲಿಸಿದ ರವಿಕುಮಾರ್ ನೆರವಿಗೆ ಧಾವಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ತಂದೆ, ಮಗುವನ್ನು ತಮ್ಮ ಕಾರಿನಲ್ಲೇ ಖಾಸಗಿ ಕ್ಲಿನಿಕ್ಗೆ ಕರೆದೊಯ್ದು ತಾವೇ ಖುದ್ದಾಗಿ ಚಿಕಿತ್ಸೆ ನೀಡಿದ್ದಾರೆ.
ಪ್ರಥಮ ಚಿಕಿತ್ಸೆಯ ಬಳಿಕ ದಾವಣಗೆರೆಯಿಂದ ಆಂಬ್ಯುಲೆನ್ಸ್ ಕರೆಯಿಸಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ರವಿಕುಮಾರ್ ಕೆಲ ತಿಂಗಳ ಹಿಂದಷ್ಟೇ ಜಗಳೂರಿನಿಂದ ದಾವಣಗೆರೆಗೆ ವಾಪಸಾಗುವಾಗ ಇದೇ ರೀತಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದ ಸವಾರನನ್ನು ರಕ್ಷಿಸಿ ಸುದ್ದಿಯಾಗಿದ್ದರು.
ಇದನ್ನೂ ಓದಿ: ಹೊಸಕೋಟೆ: ದೇವಸ್ಥಾನಗಳಲ್ಲಿ ಪ್ರಸಾದ ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥ; ಓರ್ವ ಮಹಿಳೆ ಸಾವು