ದಾವಣಗೆರೆ: ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಅವರ ಕುಟುಂಬದವರು ಈಗಾಗಲೇ ದೂರು ನೀಡಿದ್ದು, ಸೂಕ್ತ ತನಿಖೆಯ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆರ್‌ಟಿಐ ಕಾರ್ಯಕರ್ತ ಗುರುಪಾದಯ್ಯ ಮಠ್ ಒತ್ತಾಯಿಸಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಪ್ಪಿತಸ್ಥ ಪೊಲೀಸರ ಮೇಲೆ ಕೇಸ್ ದಾಖಲಾಗಿ , ಅವರನ್ನು ಸಸ್ಪೆಂಡ್ ಮಾಡಿ , ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಪೊಲೀಸರ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟಿದ್ದ ಹರೀಶ್ ಹಳ್ಳಿ ಸಾವಿನ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಇದೊಂದು ವ್ಯವಸ್ಥಿತ ಹತ್ಯೆ, ಇದರ ಹಿಂದೆ ದೊಡ್ಡ ಕಾಣದ ಕೈಗಳಿವೆ ಎಂಬುದು ನಮ್ಮ ಅನುಮಾನ, ಸರ್ಕಾರ ಈ ಕೇಸನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಹೇಳಿದರು.
ಆರ್‌ಟಿಐ ಕಾರ್ಯಕರ್ತನಾದ ಹರೀಶ್ ಹಳ್ಳಿ ಒಬ್ಬ ಧೈರ್ಯವಂತ ಹೋರಾಟಗಾರನಾಗಿದ್ದನು. ಸಣ್ಣ ಪುಟ್ಟ ಪ್ರಕರಣಗಳಿಗೆ ಹೆದರಿ ಓಡಿಹೋಗುವ, ಆತ್ಮಹತ್ಯೆ ಮಾಡಿಕೊಳ್ಳುವ ಜಾಯಮಾನದವನಾಗಿರಲಿಲ್ಲ. ಆತನ ವಿರುದ್ಧ ಕೊಲೆ, ದರೋಡೆ, ಅತ್ಯಾಚಾರದಂತಹ ತೀವ್ರ ಕ್ರಿಮಿನಲ್ ಕೇಸ್ ದಾಖಲಾಗಿರಲಿಲ್ಲ. ಆತನೇನು ಉಗ್ರಗಾಮಿಯಾಗಿರಲಿಲ್ಲ, ಕೇವಲ ಈತನ ವಿರುದ್ಧ ದಾಖಲಾಗಿದ್ದ ಖಾಸಗಿ ನಿವೇಶನಗಳ ನಕಲಿ ದಾಖಲೆ ಸೃಷ್ಟಿ ಕೇಸ್ ಮಾತ್ರ. ಎಫ್ಐಆರ್ ಆದ 3-4 ದಿನಗಳ ನಂತರ, ಅದೂ ಮಧ್ಯರಾತ್ರಿ ವೇಳೆ ಹೋಗಿ ಪೊಲೀಸರು ಆತನನ್ನು ಬಂಧಿಸುವ ಅವಶ್ಯಕತೆ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಹರೀಶ್ ಹಳ್ಳಿ ಪೊಲೀಸ್ ಇಲಾಖೆಯಲ್ಲಿನ ಕೆಲವು ಹಗರಣಗಳನ್ನು ವಿಶೇಷವಾಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಅನಾಥ ಶವಗಳ ಮಾರಾಟ ಮಾಫಿಯಾದ ಬಗ್ಗೆ, ಕೆಲವು ಅಧಿಕಾರಸ್ಥರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳ ಅಕ್ರಮ ಭೂ ಮಾಫಿಯಾ, ಅಕ್ರಮ ಗಣಿಗಾರಿಕೆ, ವಿವಿಧ ಇಲಾಖೆಗಳ ಭ್ರಷ್ಟಾಚಾರದ ವಿರುದ್ಧ ಹತ್ತು ಹಲವು ಹೋರಾಟಗಳನ್ನು ಮಾಡಿದ್ದಾರೆ. ಮತ್ತು ಘನ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನೂ ಸಹ ಹೂಡಿದ್ದಾರೆ. ಉನ್ನತ ಅಧಿಕಾರಿಗಳು ಮತ್ತು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳ ವಿರೋಧವನ್ನು ಎದುರಿಸುತ್ತಿದ್ದರು ಎಂದು ಆರ್‌ಟಿಐ ಕಾರ್ಯಕರ್ತ ಗುರುಪಾದಯ್ಯ ಮಠ್ ಹೇಳಿದರು.
ಪ್ರಕರಣದ ಹಿನ್ನೆಲೆ: ನಿವೇಶನಗಳ ನಕಲಿ ದಾಖಲೆ ಸೃಷ್ಠಿಸಿ ತಮ್ಮ ಹೆಸರಿಗೆ ನೋಂದಣಿ ಮಾಡಿದ ಆರೋಪ ಹರೀಶ್ ಮೇಲಿತ್ತು. ಪ್ರಕರಣದ ವಿಚಾರಣೆ ನಡೆಸಲು ಭಾನುವಾರ ತಡರಾತ್ರಿ ಕಾಕನೂರಿನಲ್ಲಿ ಪೊಲೀಸರು ಹರೀಶ್ಅವರನ್ನು ವಶಕ್ಕೆ ಪಡೆದಿದ್ದರು. ಕಾರಿನಲ್ಲಿ ದಾವಣಗೆರೆಗೆ ಕರೆದುಕೊಂಡು ಬರುವಾಗ ದಾವಣಗೆರೆ ತಾಲೂಕಿನ ತೋಳಹುಣಸೆ ಬಳಿ ಹರೀಶ್ ತಪ್ಪಿಸಿಕೊಳ್ಳಲು ಮೇಲ್ಸೇತುವೆಯಿಂದ ಹಾರಿದ್ದು ತೀವ್ರ ಸ್ವರೂಪದ ಗಾಯಗಳಾಗಿ ಕೊನೆಯುಸಿರೆಳೆದಿದ್ದರು. ವಂಚನೆ ಪ್ರಕರಣವೊಂದರಲ್ಲಿ ಪೊಲೀಸರ ವಶದಲ್ಲಿದ್ದ ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ದಾವಣಗೆರೆ ಎಸ್ಪಿ ಅರುಣ್ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಕರ್ತವ್ಯ ಲೋಪ ಆರೋಪದಡಿ ಗಾಣಗಾಪುರ ಪಿಎಸ್ಐ ಅಯ್ಯಣ್ಣ ಅಮಾನತು