ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ಜಿಲ್ಲಾಡಳಿತದ ಆದೇಶಕ್ಕೆ ಕ್ಯಾರೇ ಎನ್ನದ ಜನರಿಗೆ ಜಿಲ್ಲಾಡಳಿತ ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದೆ.
ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹಾಗೂ ಎಸ್ಪಿ ಹನುಮಂತರಾಯ ಅವರೇ ಖುದ್ದಾಗಿ ದಾಳಿ ನಡೆಸಿ ಮಾಸ್ಕ್ ಧರಿಸದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿ, ಮಾಸ್ಕ್ ವಿತರಿಸಿದ್ದಾರೆ. ಅಂಗಡಿಗಳ ಮೇಲೂ ದಾಳಿ ನಡೆಸಿ ಮಾಲೀಕರಿಗೂ ಫೈನ್ ಹಾಕಿದರು.
ನಗರದ ಅರಳಿಮರ ವೃತ್ತ, ಬಾಷಾ ನಗರ, ವಿದ್ಯಾನಗರ, ಎಂಸಿಸಿಬಿ ಬ್ಲಾಕ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದಾಳಿ ನಡೆಸಿದ ಮಹಾಂತೇಶ್ ಬೀಳಗಿ ಹಾಗೂ ಹನುಮಂತರಾಯ ನೇತೃತ್ವದಲ್ಲಿ ನಗರದ ಪೊಲೀಸ್ ಅಧಿಕಾರಿಗಳೊಂದಿಗೆ ಮಾಸ್ಕ್ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. ಜನರು ಬೇಕಾಬಿಟ್ಟಿಯಾಗಿ ಓಡಾಡುವುದು, ಸಾಮಾಜಿಕ ಅಂತರ ಪಾಲನೆ ಮಾಡದಿರುವುದು, ಮಾಸ್ಕ್ ಧರಿಸದಿರುವುದು ಸೇರಿದಂತೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಕಳೆದ ಮಾರ್ಚ್ ತಿಂಗಳಿನಿಂದ ಸೆಪ್ಟಂಬರ್ ಅಂತ್ಯದವರೆಗೆ 84 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಡಿವೈಎಸ್ಪಿ ನಾಗೇಶ್ ಐತಾಳ್, ಪೊಲೀಸ್ ನಿರೀಕ್ಷಕರಾದ ಗಜೇಂದ್ರಪ್ಪ, ಗುರುಬಸವರಾಜ ಹಾಗೂ ಪಿಎಸ್ ಐ, ಪೊಲೀಸ್ ಸಿಬ್ಬಂದಿ ಸಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.