ದಾವಣಗೆರೆ: ದೀಪದ ಕೆಳಗೆ ಕತ್ತಲೆ ಎಂಬಂತೆ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಇರುವ ವಾರ್ಡ್ ನಲ್ಲೇ ಮೂಲಭೂತ ಸೌಲಭ್ಯ ಮರೀಚಿಕೆಯಾಗಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ಮಹಾನಗರ ಪಾಲಿಕೆ ಚುನಾವಣಾ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ನಗರದ 45ನೇ ವಾರ್ಡ್ ವ್ಯಾಪ್ತಿಯ ಕರೂರ್ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಕಚೇರಿ ಇದೆ. ಆದರೂ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ ಈ ಪ್ರದೇಶ. ಮುಖ್ಯರಸ್ತೆಯೇ ಕೆಸರು ಗದ್ದೆಯಂತಿದ್ದರು, ಇದುವರೆಗೂ ರಸ್ತೆ ನಿರ್ಮಾಣವಾಗಿಲ್ಲ. ದಿನನಿತ್ಯ ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಹರಸಾಹಸ ಪಟ್ಟು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಇನ್ನೂ ಇಲ್ಲಿರುವ ಚರಂಡಿಗಳು 20 ವರ್ಷಗಳಿಂದ ಸ್ವಚ್ಛಗೊಂಡಿಲ್ಲ. ವಾರ್ಡ್ ನಲ್ಲಿ ರುದ್ರಭೂಮಿ, ವಿದ್ಯುತ್ ಸಂಪರ್ಕ ಇಲ್ಲ, ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ, ಕಸ ವಿಲೇವಾರಿ ಆಗೇ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ವಾರ್ಡ್ಗೆ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ತಮ್ಮ ವಾರ್ಡ್ ನಲ್ಲಿ ಅಭಿವೃದ್ದಿ ಕೆಲಸಗಳು ನಡೆಯದಿರುವ ಹಿನ್ನಲೆ ಮುಖ್ಯ ರಸ್ತೆ ಬಂದ್ ಮಾಡಿ ಇದೇ 12 ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತಿರುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.