ದಾವಣಗೆರೆ : ಬೆಣ್ಣೆ ನಗರಿ ದಾವಣಗೆರೆ ಶೇಕಡಾ 80ರಷ್ಟು ನೀರಾವರಿ ಕೃಷಿ ಪ್ರದೇಶ ಹೊಂದಿದೆ. ಈ ಪ್ರದೇಶಕ್ಕೆ ಭದ್ರಾ ಜಲಾಶಯದಿಂದ ನೀರು ಹರಿಸುವುದು ವಾಡಿಕೆ. ಈ ಬಾರಿ ಬೇಸಿಗೆ ಬೆಳೆಗಾಗಿ ದಾವಣಗೆರೆಯ ಅಚ್ಚುಕಟ್ಟು ಭಾಗದ ರೈತರು ಒಟ್ಟು 60 ದಿನಗಳ ಕಾಲ ಜಲಾಶಯದಿಂದ ನೀರು ಹರಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ.
ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ರೈತರ ಮಧ್ಯೆ ಭದ್ರಾ ನೀರಿಗಾಗಿ ಮತ್ತೆ ಹಗ್ಗಜಗ್ಗಾಟ ಆರಂಭವಾಗಿದೆ. ಸದ್ಯಕ್ಕೆ ಜಲಾಶಯದಲ್ಲಿ 22 ಟಿಎಂಸಿ ನೀರಿದ್ದು, ನಮಗೆ ಬೇಸಿಗೆ ಬೆಳೆ ಬೆಳೆಯಲು ಅವಕಾಶ ಮಾಡಿಕೊಡಿ ಎಂಬ ಕೂಗು ದಾವಣಗೆರೆ ರೈತರಿಂದ ಕೇಳಿಬಂದಿದೆ. ಭತ್ತವನ್ನು ಬೆಳೆಯುವ ದಾವಣಗೆರೆ ರೈತರಿಗೆ ನೀರು ಹರಿಸಲು ಶಿವಮೊಗ್ಗ ಜಿಲ್ಲೆಯ ರೈತರು ಅಡಚಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶಿವಮೊಗ್ಗದಲ್ಲಿ ಐಸಿಸಿ ಸಭೆ ಕರೆದಿರುವ ಬೆನ್ನಲ್ಲೇ ದಾವಣಗೆರೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಆಯೋಜನೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಸಲಹ ಸಮಿತಿ ಸಭೆ ನಡೆಸಲಾಯಿತು. ದಾವಣಗೆರೆ ನಗರದ ಜಲಸಂಪನ್ಮೂಲ ಇಲಾಖೆಯಲ್ಲಿ ಆಯೋಜನೆ ಮಾಡಿದ್ದ ಸಭೆಯಲ್ಲಿ ನೀರು ಹರಿಸುವ ಬಗ್ಗೆ 6 ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು : ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ಆರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಐಸಿಸಿ ಸಭೆ ಮಾಡದೆ ಭದ್ರಾ ಮೇಲ್ದಂಡೆಗೆ ನೀರು ಹರಿಸಬಾರದು, ತುಂಗಾದಿಂದ ಭದ್ರಾಕ್ಕೆ ನೀರು ಲಿಫ್ಟ್ ಮಾಡದ ಹೊರತು ಭದ್ರಾ ಮೇಲ್ದಂಡೆಗೆ ನೀರು ಬಿಡಬಾರದು. ಭದ್ರಾ ಅಣೆಕಟ್ಟಿನಲ್ಲಿ ಸದ್ಯಕ್ಕೆ 70 ದಿನಗಳಿಗೆ ಆಗುವಷ್ಟು ನೀರಿದೆ. 60 ದಿನಗಳ ಕಾಲ ನೀರು ನೀಡಲು ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ತಲಾ 20 ದಿನಗಳ ಕಾಲ ಒಟ್ಟು 60 ದಿನಗಳವರೆಗೆ ನೀರು ಹರಿಸಬೇಕೆಂಬ ಒತ್ತಡವನ್ನು ಐಸಿಸಿಗೆ ಹಾಕುವುದು ಹಾಗೂ ಅಕ್ರಮ ಪಂಪ್ಸೆಟ್ಗಳನ್ನು ತೆರವು ಮಾಡುವುದು ಮುಖ್ಯವಾಗಿದೆ ಎಂದು ರೈತ ಮುಖಂಡ ಕೊಳೆನಹಳ್ಳಿ ಸತೀಶ್ ತಿಳಿಸಿದರು.
25 ಅಕ್ರಮ ಪಂಪ್ಸೆಟ್ ತೆರವು ಮಾಡಿ : ಅಕ್ರಮ ಪಂಪ್ಸೆಟ್ ಬಗ್ಗೆ ರೈತ ಮುಖಂಡ ನಾಗೇಶ್ವರಾವ್ ಪ್ರತಿಕ್ರಿಯಿಸಿ, ದಾವಣಗೆರೆಯಲ್ಲಿ 80% ನೀರಾವರಿ ಪ್ರದೇಶ ಇರುವುದರಿಂದ ಐಸಿಸಿ ಸಭೆಯೂ ಇಲ್ಲಿಯೇ ನಡೆಯಬೇಕು. ಕಾಡಾ ಕಚೇರಿ ಕೂಡ ದಾವಣಗೆರೆಯಲ್ಲಿ ಇರಬೇಕು. ಪ್ರಸ್ತುತವಾಗಿ 25 ಸಾವಿರ ಅಕ್ರಮ ಪಂಪ್ಸೆಟ್ ಇದ್ದು, ನೀರು ಹರಿಸದ ಕಾರಣ ಪಂಪ್ಸೆಟ್ ತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ತೆರವು ಮಾಡಿ ಎಫ್ಐಆರ್ ಮಾಡಿಸಿದ್ದೀರಾ? ಸಣ್ಣ ರೈತರು ಈ ಕೆಲಸ ಮಾಡುತ್ತಿಲ್ಲ, ದೊಡ್ಡ ರೈತರೇ ಇಂತಹ ಕೆಲಸ ಮಾಡುವುದು ಎಂದು ಆರೋಪಿಸಿದರು.
ಇದನ್ನೂ ಓದಿ : ಧಾರವಾಡ: ಜಮೀನಿನಲ್ಲಿದ್ದ ಹತ್ತಿ ಕಳ್ಳತನ, ರೈತ ಕಂಗಾಲು