ದಾವಣಗೆರೆ: ರಸ್ತೆ ಸೇರಿ ಇತರ ಮೂಲ ಸೌಲಭ್ಯ ವಂಚಿತ ರಾಂಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಟಿವಿ ಭಾರತದಲ್ಲಿ ಸುದ್ದಿ ಗಮನಿಸಿದ ಜಿಲ್ಲಾಧಿಕಾರಿಗಳು, ದಾವಣಗೆರೆ ತಾಲೂಕಿನ ರಾಂಪುರ ಗ್ರಾಮಕ್ಕೆ ಭೇಟಿ ನೀಡಿ ಒಂದೂವರೆ ಕಿಮೀ ಹದೆಗೆಟ್ಟ ರಸ್ತೆಯಲ್ಲಿ ನಡೆದು ಪರಿಶೀಲನೆ ನಡೆಸಿದ್ರು. ಇದು ಈಟಿವಿ ಫಲಶೃತಿಯಾಗಿದ್ದು, ಇಂದು ಬೆಳಗ್ಗೆಯಷ್ಟೇ ಈ ಬಗ್ಗೆ ಸಮಗ್ರ ಸುದ್ದಿ ಪ್ರಸಾರ ಮಾಡಿತ್ತು.
ದಾವಣಗೆರೆ ತಾಲೂಕು ಮಾಯಕೊಂಡ ಹೋಬಳಿಯ ರಾಂಪುರದ ನಿವಾಸಿಯಾಗಿರುವ ಬಿಂದು ರಾಂಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಮೂಲ ಸೌಕರ್ಯಗಳು ದೊರಕುವ ತನಕ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದರು.
ಜಿಲ್ಲಾ ಕೇಂದ್ರದಿಂದ ಕೂಗಳತೆಯಲ್ಲಿರುವ ಈ ರಾಂಪುರಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿತ್ತು. ಬಸ್ ಸಂಪರ್ಕ ಇಲ್ಲದೇ ಈ ಗ್ರಾಮದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ಇನ್ನು ಈ ಗ್ರಾಮದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲ, ಗ್ರಾಮಗಳಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ ಎಂದು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರಂತೆ. ಹಾಗೂ ಇಲ್ಲಿಂದ ಹೆಣ್ಣು ತರಲು ಜನ ಜನ ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದರು.
ಇದನ್ನೂ ಓದಿ:ಸೂಕ್ತ ರಸ್ತೆ ಆಗೋವರೆಗೂ ಮದುವೆ ಆಗೋದಿಲ್ಲ: ಪಿಎಂ, ಸಿಎಂಗೆ ಪತ್ರ ಬರೆದು ಬೆಣ್ಣೆನಗರಿ ಯುವತಿ ಶಪಥ
ತನ್ನ ಗ್ರಾಮಕ್ಕೆ ಡಾಂಬರು ರಸ್ತೆ ಆಗುವ ತನಕ ಮದುವೆಯಾಗುವುದಿಲ್ಲ ಎಂದು ಯುವತಿ ಬಿಂದು ಪಟ್ಟು ಹಿಡದಿದ್ದರು. ಸಮಸ್ಯೆ ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಪತ್ರ ಬರೆದಿದ್ದರು.
ಇದೀಗ ಈಟಿವಿ ಭಾರತ ವರದಿ ಗಮನಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಹಾಗೂ ಮೂಲ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಇದರ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬರುವಂತೆ ಮಾಡಿದ ಈಟಿವಿ ಭಾರತಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದರು.