ದಾವಣಗೆರೆ: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದೆ. ಇಡೀ ನಗರ ಲಾಕ್ ಆಗಿದ್ದು, ಕಟ್ಟಡ ಕಾರ್ಮಿಕರ ಜೀವನ ಆಯೋಮಯವಾಗಿದೆ. ಕಟ್ಟಡ ಕಾರ್ಮಿಕರು ಕೆಲಸಕ್ಕೆ ತೆರಳುವಂತೆ ಸರ್ಕಾರ ಅನುಮತಿ ನೀಡಿದರೂ ಕೂಡ ಪೊಲೀಸರ ಕಟ್ಟೆಚ್ಚರದಿಂದ ಸರಿಯಾಗಿ ಕಟ್ಟಡಗಳ ನಿರ್ಮಾಣ ಕಾರ್ಯ ಆಗುತ್ತಿಲ್ಲ. ಇದು ಆತಂಕಕ್ಕೆ ಕಾರಣ ಆಗಿದೆ.ರ
ಬೆಣ್ಣೆನಗರಿ ದಾವಣಗೆರೆಯಲ್ಲಿಯೂ ಕೊರೊನಾ ಅರ್ಭಟ ಮುಂದುವರೆದಿದ್ದು, ಲಾಕ್ಡೌನ್ ಜಾರಿಯಲ್ಲಿದೆ. ಕಟ್ಟಡ ಕಾರ್ಮಿಕರಿಗೆ ಕೆಲಸಕ್ಕೆ ತೆರಳಲು ಅನುಮತಿ ನೀಡಿದ್ರೂ ಕೂಡ ಕೆಲಸಕ್ಕೆ ತೆರಳಲು ಆಗದೆ ಜೀವನ ನಡೆಸುವುದೇ ಕಷ್ಟಕರವಾಗಿದೆ. ಕೂಲಿ ಮಾಡಿ ಜೀವನದ ಬಂಡಿ ನಡೆಸುತ್ತಿದ್ದ ಕಟ್ಟಡ ಕಾರ್ಮಿಕರೀಗ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ವಸ್ತುಗಳ ಬೆಲೆ ಗಗನಕ್ಕೇರಿದ ಹಿನ್ನೆಲೆ ಕೆಲಸ ನಿಲ್ಲಿಸಿರುವುದು ಕಾರ್ಮಿಕರ ಆತಂಕಕ್ಕೆ ಕಾರಣ ಆಗಿದೆ. ಇನ್ನು ಕೆಲ ಕಟ್ಟಡ ಕಾರ್ಮಿಕರು ಪ್ರತಿ ದಿನ ಕೂಲಿಗಾಗಿ ತೆರಳುತ್ತಿದ್ದರೆ ಪೊಲೀಸರ ಪ್ರಶ್ನೆ ಹೆಚ್ಚಾದ ಬೆನ್ನಲ್ಲೇ ಕೆಲಸಕ್ಕೆ ತೆರಳುವುದಕ್ಕೆ ಹಿಂದೇಟು ಹಾಕುವಂತಾಗಿದೆ. ಇದರಿಂದ ಮನೆ ನಡೆಸುವುದೇ ಕಷ್ಟಕರವಾಗಿದ್ದು, ಇಡೀ ಕಾರ್ಮಿಕರ ವರ್ಗ ಕೆಲಸ ಇಲ್ಲದೆ ಹೈರಾಣಾಗಿದೆ.
ಸರ್ಕಾರದಿಂದ 10,000 ಧನಸಹಾಯ ಘೋಷಣೆಯಾಗಬೇಕು:
ಕಳೆದ ವರ್ಷದಂತೆ ಈ ವರ್ಷವೂ ಲಾಕ್ಡೌನ್ ಮಾಡಿದ್ದರಿಂದ ಇಡೀ ಕಾರ್ಮಿಕ ವರ್ಗಕ್ಕೆ ದಿಕ್ಕೇ ತೋಚದಂತಾಗಿದೆ. ಇದರಿಂದ ಸಿಎಂ ಯಡಿಯೂರಪ್ಪನವರು 3,000 ರೂ. ಧನಸಹಾಯ ಘೋಷಣೆ ಮಾಡಿರುವುದು ಕಟ್ಟಡ ಕಾರ್ಮಿಕರ ಆಕ್ರೋಶಕ್ಕೆ ಕಾರಣ ಆಗಿದೆ. ಪ್ರತಿ ಕಟ್ಟಡ ಕಾರ್ಮಿಕನಿಗೆ 10,000 ರೂ. ಪರಿಹಾರವನ್ನು ಘೋಷಣೆ ಮಾಡಬೇಕೆಂಬುದು ಈ ಭಾಗದ ಕಟ್ಟಡ ಕಾರ್ಮಿಕರ ಬೇಡಿಕೆಯಾಗಿದೆ. ಈಗಾಗಲೇ ಸರ್ಕಾರ ಘೋಷಣೆ ಮಾಡಿರುವ 3,000 ರೂ. ಧನಸಹಾಯದಲ್ಲಿ ತರಕಾರಿ ಕೊಂಡುಕೊಳ್ಳಲು ಆಗುವುದಿಲ್ಲ ಎಂಬುದು ಮಹಿಳಾ ಕಟ್ಟಡ ಕಾರ್ಮಿಕರ ಆಕ್ರೋಶವಾಗಿದೆ.
ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಬೋಗಸ್ ಕಾರ್ಡ್:
ರಾಜ್ಯ ಸರ್ಕಾರ ಪ್ರತಿಯೊಬ್ಬ ಕಟ್ಟಡ ಕಾರ್ಮಿಕನಿಗೆ ಸಹಾಯಧನ ಘೋಷಣೆ ಮಾಡಿದ್ದು, ದಾವಣಗೆರೆಯ ಸುಮಾರು 70,000 ಕಟ್ಟಡ ಕಾರ್ಮಿಕರು ಉಪಯೋಗ ಪಡೆದುಕೊಳ್ಳಲ್ಲಿದ್ದಾರೆ. ಅದ್ರೆ ಜಿಲ್ಲೆಯಲ್ಲಿ ಒಂದು ಲಕ್ಷದ ಇಪ್ಪತ್ತೊಂದು ಸಾವಿರ ಕಟ್ಟಡ ಕಾರ್ಮಿಕರ ಕಾರ್ಡ್ ಇದೆ ಎಂದು ಸರ್ಕಾರ ಹೇಳುತ್ತಿದ್ದು, ಸಾಕಷ್ಟು ಜನ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಬೋಗಸ್ ಕಾರ್ಡ್ ಮಾಡಿಕೊಂಡಿದ್ದಾರಂತೆ. ಅದಷ್ಟು ಬೇಗ ಈ ರೀತಿಯ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಸೃಷ್ಟಿಯಾಗಿರುವ ಬೋಗಸ್ ಕಾರ್ಡ್ಗಳನ್ನು ಕಾರ್ಮಿಕ ಇಲಾಖೆ ಪತ್ತೆ ಹಚ್ಚುವ ಕೆಲಸ ಮಾಡಬೇಕಾಗಿದೆ ಎಂಬುದು ಕಾರ್ಮಿಕರ ಒತ್ತಾಯವಾಗಿದೆ.
ಇದನ್ನೂ ಓದಿ: ಬಿಸಿಯೂಟದ ಆಹಾರಧಾನ್ಯ ಅಸಮರ್ಪಕ ವಿತರಣೆ: ಗೋದಾಮಿನಲ್ಲೇ ಧಾನ್ಯಗಳು ಹಾಳಾಗುವ ಆತಂಕ