ದಾವಣಗೆರೆ: ಬೆಣ್ಣೆನಗರಿಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆದಿದೆ. ಒಂದೇ ದಿನ 12 ಪ್ರಕರಣ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 83ಕ್ಕೇರಿದೆ. ದಿನೇ ದಿನೆ ಸೋಂಕಿತರು ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಆತಂಕವೂ ಹೆಚ್ಚಾಗುತ್ತಿದೆ.
ಗುಜರಾತ್ನ ಅಹಮದಾಬಾದ್ಗೆ ಹೋಗಿ ಬಂದಿದ್ದ 6 ಮಂದಿಯಲ್ಲಿ ಸೋಂಕಿರುವುದು ಖಚಿತವಾಗಿದ್ದು, 9 ವರ್ಷದ ಬಾಲಕಿ ಸೇರಿ ಓರ್ವ ಮಹಿಳೆಯೂ ಬಾಧಿತರಾಗಿದ್ದಾರೆ. ಉಳಿದ ಹತ್ತು ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ.
P 695ರ ಸಂಪರ್ಕದಲ್ಲಿದ್ದ 5 ಮಂದಿ ಹಾಗೂ P-696ರ ಸಂಪರ್ಕದಲ್ಲಿದ್ದ ಒಬ್ಬರಿಗೆ ಕೋವಿಡ್-19 ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 77 ಆಕ್ಟೀವ್ ಪ್ರಕರಣಗಳಿದ್ದು, 461 ಸ್ಯಾಂಪಲ್ಗಳ ರಿಸಲ್ಟ್ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್.ಬೀಳಗಿ ತಿಳಿಸಿದರು.
ಗುಜರಾತ್ನ ಅಹಮದಾಬಾದ್ನಿಂದ ಬಂದಿದ್ದ 8 ಜನರ ಪೈಕಿ ಏಳು ಮಂದಿಯ ರಿಪೋರ್ಟ್ ಬಂದಿದ್ದು, ಈ ಪೈಕಿ ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕಳೆದ 9ನೇ ತಾರೀಖಿನಂದು ಶಿವಮೊಗ್ಗಕ್ಕೆ ಬಂದವರ ಜೊತೆ ಇವರು ಬಂದಿದ್ದರು ಎಂದು ತಿಳಿಸಿದ ಜಿಲ್ಲಾಧಿಕಾರಿ, ಹೊನ್ನಾಳಿ ತಾಲೂಕಿನ ಹುಣಸಘಟ್ಟದಲ್ಲಿ ಬಸ್ನಿಂದ ಕೆಳಗಿಳಿಯುವ ಮುನ್ನವೇ ಎಲ್ಲರನ್ನೂ ವಶಕ್ಕೆ ಪಡೆದು ಕ್ವಾರಂಟೈನ್ ಮಾಡಲಾಗಿದೆ. ದಾವಣಗೆರೆಯಲ್ಲಿ ಎಲ್ಲಿಯೂ ಇವರು ಇಳಿದಿಲ್ಲ ಎಂದು ಸ್ಪಷ್ಟಪಡಿಸಿದರು.