ದಾವಣಗೆರೆ: ತೈಲ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ 20ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳ ಎದುರು ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ನ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಒಂದೊಂದು ಬಂಕ್ಗಳ ಮುಂದೆ ಪ್ರತಿಭಟಿಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ, ಕೊರೊನಾ ವೈರಸ್ ಬಂದ ಬಳಿಕ ಲಾಕ್ಡೌನ್ ಮಾಡಲಾಗಿತ್ತು. ಈ ವೇಳೆ ವ್ಯಾಪಾರ-ವಹಿವಾಟು ಇಲ್ಲದೇ, ಜನರು ಕಂಗೆಟ್ಟಿದ್ದರು. ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನರ ಮೇಲೆ ಗದಾಪ್ರಹಾರ ನಡೆಸುತ್ತಿದೆ.
ತೈಲ ಬೆಲೆ ಏರಿಕೆಯಿಂದದಾಗಿ ಅಗತ್ಯ ವಸ್ತುಗಳ ಬೆಲೆ ಸಹ ಏರಿಕೆಯಾಗುತ್ತದೆ. ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿರುವ ಸ್ಥಿತಿಯಲ್ಲಿ ಸರ್ಕಾರಗಳು ಜನರ ಸಹಾಯಕ್ಕೆ ಬಾರದೆ, ಪ್ರತಿದಿನ ತೈಲ ಬೆಲೆ ಏರಿಸಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ ಎಂದರು. ಇನ್ನು, ನಗರದ ಲಕ್ಷ್ಮಿ ಫ್ಲೋರ್ ಮಿಲ್ ಮುಂಭಾಗದಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಮೋದಿ ಶವಸಂಸ್ಕಾರ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.