ದಾವಣಗೆರೆ: ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವಿನ ಪ್ರಕರಣವನ್ನು ಸಿಬಿಐ ಅಥವಾ ಎನ್ಐಎ ತನಿಖೆಗೆ ನೀಡಲು ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊನ್ನಾಳಿಗೆ ಹೋಗಿ ರೇಣುಕಾಚಾರ್ಯ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ. ಅವರ ಜೊತೆ ಮಾತನಾಡಿ ಬಳಿಕ ಮುಂದಿನ ನಿರ್ಧಾರ ಎಂದರು.
7ನೇ ವೇತನ ಆಯೋಗ ಜಾರಿ: ಏಳನೇ ವೇತನ ಆಯೋಗ ಜಾರಿಗಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇದು ಹಲವು ದಿನಗಳಿಂದ ಸರ್ಕಾರಿ ನೌಕರರ ಒತ್ತಾಯ ಕೂಡ ಆಗಿತ್ತು ಎಂದು ಹೇಳಿದರು.
ವಿಕಿಪೀಡಿಯಾ ಅಧ್ಯಯನ ಮಾಡಿ ಹೇಳ್ತಾರೆ: ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಶಾಸಕ ಸತೀಶ್ ಜಾರಕಿಹೊಳಿ ಯಾವುದೋ ಒಂದು ಪುಸ್ತಕ, ವಿಕಿಪೀಡಿಯಾ ಅಧ್ಯಯನ ಮಾಡಿ ಹೇಳ್ತಾರೆ. ವಿಕಿಪೀಡಿಯ ತೆರೆದವನೇ ಎಷ್ಟು ಬಾರಿ ಜೈಲಿಗೆ ಹೋಗಿದ್ದಾನೆ ಎಂದು ಗೊತ್ತಿದೆ. ಅದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲವಾದರೂ ಹೇಳಿದ್ದು ಯಾರು?, ಸಿದ್ದರಾಮಯ್ಯ ಎಲ್ಲದರ ಬಗ್ಗೆಯೂ ಮಾತನಾಡುವರು ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಚಂದ್ರು ಕೈಗೆ ಹಗ್ಗ ಕಟ್ಟಿದ್ದಾರೆ.. ಇದು ವ್ಯವಸ್ಥಿತ ಕೊಲೆ: ಶಾಸಕ ರೇಣುಕಾಚಾರ್ಯ ಆರೋಪ
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ವಿರುದ್ಧ ಭ್ರಷ್ಟಾಚಾರ ಆರೋಪದ ಆಡಿಯೋ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳ ಹೇಳಿಕೆ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಯುತ್ತಿದೆ ಎಂದರು.
ದಾವಣಗೆರೆ ಉತ್ತರದಿಂದ ಸ್ಪರ್ಧೆ ಇಲ್ಲ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಹಿಂದೆಯೇ ಹೇಳಿದ್ದೆ. ನನ್ನ ತಲೆಯಲ್ಲಿ ಅ ಕುರಿತ ಪ್ರಶ್ನೆಯೇ ಇಲ್ಲ ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಚಂದ್ರು ಹೊನ್ನಾಳಿ ಜನರ ಪ್ರೀತಿಗೆ ಪಾತ್ರನಾಗಿದ್ದ, ಅವನ ಸಾವು ಆಘಾತ ತಂದಿದೆ: ಬಿ ವೈ ವಿಜಯೇಂದ್ರ