ದಾವಣಗೆರೆ: ಮಾಜಿ ಸಚಿವರೊಬ್ಬರ ಒಡೆತನದ ಮಿಲ್ ಹಿಂಭಾಗದ ಫಾರ್ಮ್ ಹೌಸ್ ಮೇಲೆ ಸಿಸಿಬಿ ಪೊಲೀಸರು ಬುಧವಾರ ದಾಳಿ ನಡೆಸಿದ್ದರು. ಈ ವೇಳೆ ಸಾಕಷ್ಟು ವನ್ಯಜೀವಿಗಳು ಪತ್ತೆಯಾಗಿವೆ ಎಂದು ಡಿಎಫ್ಒ ಜಗನ್ನಾಥ್ ಮಾಹಿತಿ ನೀಡಿದ್ದಾರೆ.
ಎರಡು ನರಿಗಳು, 10 ಕೃಷ್ಣಮೃಗಗಳು, ಏಳು ಚುಕ್ಕೆ ಜಿಂಕೆಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು ಸಿಕ್ಕಿವೆ. ಅವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದ ಸೆಂಥಿಲ್: ಡಿ.18ರಂದು ಬೆಂಗಳೂರು ನಗರದ ಹೆಬ್ಬಾಳದಲ್ಲಿ ಈ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದ ಸೆಂಥಿಲ್ ಎಂಬ ವ್ಯಕ್ತಿ ಜಿಂಕೆ ಚರ್ಮ, ಜಿಂಕೆ ಕೊಂಬು, ಜಿಂಕೆ ಮೂಳೆ ಮಾರಾಟ ಮಾಡಲು ಬಂದಿದ್ದ. ಈ ವೇಳೆ, ಆತ ಸಿಸಿಬಿ ಪೋಲಿಸರ ಬಲೆಗೆ ಬಿದ್ದಿದ್ದ. ಆತನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಜೀವಂತ ವನ್ಯಪ್ರಾಣಿಗಳು ಸಿಕ್ಕಿವೆ ಎಂದು ಡಿಎಫ್ಒ ಜಗನ್ನಾಥ್ ಮಾಹಿತಿ ನೀಡಿದ್ದಾರೆ.
ಸಿಸಿಬಿ ಪೊಲೀಸರು ಸೆಂಥಿಲ್‌ನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಫಾರ್ಮ್‌ನಲ್ಲಿದ್ದ ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮುಂದಿನ ಕ್ರಮಕ್ಕೆ ಪ್ರಕರಣವನ್ನು ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವನ್ಯ ಜೀವಿಗಳು ಅರಣ್ಯ ಇಲಾಖೆಗೆ ಹಸ್ತಾಂತರ: ಫಾರ್ಮ್ ಹೌಸ್‌ನಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕ ವನ್ಯಜೀವಿಗಳನ್ನು ಈಗಾಗಲೇ ಸ್ಥಳೀಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿಲಾಗಿದೆ. ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ನ್ಯಾಯಾಲಯವನ್ನು ಕೋರಲಾಗಿದೆ.
ಇದನ್ನೂ ಓದಿ: ದಾವಣಗೆರೆ: ಅರಣ್ಯಾಧಿಕಾರಿಗಳಿಂದ ದಿಢೀರ್ ದಾಳಿ
ಆದೇಶದ ಪ್ರತಿ ಸಿಗುತ್ತಿದ್ದಂತೆಯೇ ತನಿಖಾಧಿಕಾರಿ ನೇಮಿಸಿ ಪ್ರಕರಣದ ತನಿಖೆ ಆರಂಭಿಸಿ ಶೀಘ್ರವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ದಾವಣಗೆರೆ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್. ಜಗನ್ನಾಥ ಮಾಹಿತಿ ನೀಡಿದರು.