ದಾವಣಗೆರೆ: ವ್ಯಕ್ತಿಯೊಬ್ಬರನ್ನು ಅಪಹರಿಸಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದವರನ್ನು ದಾವಣಗೆರೆ ಪೋಲಿಸರು 24 ಗಂಟೆಯಲ್ಲೇ ಭೇದಿಸಿ ಐವರ ಹೆಡೆಮುರಿಕಟ್ಟಿರುವ ಘಟನೆ ನಡೆದಿದೆ. ಶುಕ್ರವಾರ ಪ್ರಕರಣದಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ದಾವಣಗೆರೆಯ ಕೆಟಿಜೆ ನಗರ ಪೋಲಿಸರು ಯಶಸ್ವಿಯಾಗಿದ್ದಾರೆ.
ಗುರುವಾರ ಮಧ್ಯಾಹ್ನ ವೇಳೆಯಲ್ಲಿ ದಾವಣಗೆರೆಯ ಅಂಬಿಕ ನಗರದ ಶೇಕ್ರಪ್ಪ ಗೋಡೌನ್ ಎದುರಿಗೆ ಲೊಕೇಶ್ (60) ಎಂಬ ವೃದ್ಧನನ್ನು ಐದು ಜನ ದುಷ್ಕರ್ಮಿಗಳು ಅಪಹರಣ ಮಾಡಿ 20 ಲಕ್ಷ ರೂಗಳಿಗೆ ಬೇಡಿಕೆ ಇಟ್ಟಿದ್ದರೆಂದು ಲೋಕೇಶ್ ಅವರ ಪುತ್ರ ನಾಗರಾಜ ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಕೆಟಿಜೆ ನಗರ ಪೊಲೀಸ್ ಠಾಣೆಯ ಪೋಲಿಸರು ಪ್ರಕರಣ ದಾಖಲಾದ 24 ಗಂಟೆಯಲ್ಲೇ ಪ್ರಕರಣ ಭೇದಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಆರ್.ಬಿ.ಬಸರಗಿ ಹಾಗೂ ದಾವಣಗೆರೆ ಗ್ರಾಮಾಂತರ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಕನ್ನಿಕಾ ಸಿಕ್ರಿವಾಲ್, ಐಪಿಎಎಸ್ ನೇತೃತ್ವದಲ್ಲಿ ತಂಡ ರಚಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ (23), ಯುವರಾಜ (30), ಸುಂದರ್ ನಾಯ್ಕ್ (21), ಚೇತನ್ ಕುಮಾರ (27) ಹಾಗೂ ಒಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಒಟ್ಟು 05 ಜನರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಚನ್ನಗಿರಿ ಠಾಣೆಯ ಸಿಬ್ಬಂದಿ ಸೇರಿ ಕಾರ್ಯಚರಣೆ ಮಾಡುವ ಮೂಲಕ ಚನ್ನಗಿರಿ ತಾಲೂಕಿನ ಅಂತಪುರ ಗ್ರಾಮದ ಬಳಿ ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಇನ್ನು ಅಪಹರಣಕ್ಕೊಳಗಾದ ವೃದ್ಧ ಲೊಕೇಶ್ ಅವರನ್ನು ರಕ್ಷಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಇಟಿಯಾಸ್ ಕಾರು ಹಾಗೂ ಯಮಹಾ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲೂ ನಡೆದಿತ್ತು ಸಂಬಂಧಿಕರಿಂದಲೇ ಯುವತಿ ಅಪಹರಣ: ಇದು ದಾವಣಗೆರೆ ಕಥೆ ಆದರೆ, ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಯುವತಿಯನ್ನು ಇಬ್ಬರು ಅಪಹರಿಸಿದ ಪ್ರಕರಣ ನಡೆದಿತ್ತು. ಇಬ್ಬರು ಆರೋಪಿಗಳು ವಿಧಾನಸೌಧ ಮೆಟ್ರೋ ನಿಲ್ದಾಣದ ಬಳಿ ಆಕೆಯನ್ನು ಏಕಾಏಕಿ ಎಳೆದು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು. ಆಗ ಸ್ಥಳದಲ್ಲಿದ್ದ ಸಿಆರ್ಪಿಎಫ್ ತಂಡ ಅಲರ್ಟ್ ಆಗಿ, ತಕ್ಷಣ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳನ್ನು ವಿಚಾರಿಸಿದಾಗ ಆತ ಸಂಬಂಧಿಯೆಂದು ತಿಳಿದಿದೆ.
ಕಳೆದ ಕೆಲವು ತಿಂಗಳ ಹಿಂದೆ ಯುವತಿಯ ತಂದೆ ನಿಧನ ಹೊಂದಿದ್ದರು. ಅವರು ಮಾಡುತ್ತಿದ್ದ ಎಫ್‌ಡಿಎ ಕೆಲಸ ಮಗಳಿಗೆ ದೊರೆತಿತ್ತು. ಇದೇ ವಿಚಾರ ಯುವತಿಯ ತಂದೆಯ ಎರಡನೇ ಪತ್ನಿಯ ಕಿರಿಯ ಸಹೋದರನ ಸಿಟ್ಟಿಗೆ ಗುರಿಯಾಗಿತ್ತು. ಎಫ್‌ಡಿಎ ಕೆಲಸ ತನ್ನ ಸಹೋದರಿಗೆ ಸಿಗಬೇಕಿತ್ತು ಎಂದು ಕ್ಯಾತೆ ತೆಗೆದಿದ್ದರು. ಅಲ್ಲದೇ ಆ ಯುವತಿಯನ್ನು ಆರೋಪಿ ಮದುವೆಯಾಗಲು ಇಚ್ಛಿಸಿದ್ದನಂತೆ. ಆದರೆ, ಯುವತಿಗೆ ಆತನನ್ನು ಮದುವೆಯಾಗಲು ಇಷ್ಟವಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಹೀಗಾಗಿ ವಿಧಾನಸೌದ ಮೆಟ್ರೋ ಸ್ಟೇಷನ್ ಬಳಿ ಯುವತಿಯನ್ನು ಅಪಹರಿಸಲು ಆರೋಪಿ ಯತ್ನಿಸಿದ್ದಾನೆ. ಆಗ ಸ್ಥಳದಲ್ಲೇ ಇದ್ದ ಸಿಆರ್ಪಿಎಫ್ ಹಾಗೂ ಕೆಎಸ್ಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದು, ವಿಧಾನಸೌಧ ಠಾಣಾ ಪೊಲೀಸರಿಗೆ ಒಪ್ಪಿಸಿದ್ದರು.
ಇದನ್ನೂ ಓದಿ: ಕೌಟುಂಬಿಕ ಕಲಹ: ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ