ದಾವಣಗೆರೆ: ಖಾಸಗಿ ಬಸ್ ಪಾದಚಾರಿ ತಲೆ ಮೇಲೆ ಹರಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದ ಘಟನೆ ನಗರದ ಅರುಣಾ ಟಾಕೀಸ್ ವೃತ್ತದಲ್ಲಿ ಜರುಗಿದೆ.
ಈ ಘಟನೆಯಿಂದಾಗಿ ರೊಚ್ಚಿಗೆದ್ದ ಸ್ಥಳೀಯರು ಬಸ್ ಮೇಲೆ ಕಲ್ಲು ತೂರಿ ಗಾಜು ಪುಡಿ ಪುಡಿ ಮಾಡುವ ಮೂಲಕ ಬಸ್ ಚಾಲಕನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಆರಾಧ್ಯ ಸ್ಟೀಲ್ ಕಂಪನಿಗೆ ಸೇರಿದ ಬಸ್ ಇದಾಗಿದೆ. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಮೃತ ವ್ಯಕ್ತಿ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಆಗಮಿಸುವಂತೆ ಪ್ರತಿಭಟನಾನಿರತರು ಪಟ್ಟು ಹಿಡಿದರು. ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಆಗಿತ್ತು. ತಕ್ಷಣ ಸ್ಥಳಕ್ಕಾಗಮಿಸಿದ ಬಡಾವಣೆ ಠಾಣೆ ಪೊಲೀಸರು, ಜನರನ್ನು ಚದುರಿಸಿ ಸುಗಮವಾಗಿ ವಾಹನ ಸಂಚರಿಸಲು ವ್ಯವಸ್ಥೆ ಮಾಡಿದರು.
ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.