ದಾವಣಗೆರೆ : ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡಲು ಕಾರ್ಯಕರ್ತರಿಂದ ಅಭಿಪ್ರಾಯವನ್ನು ದಾವಣಗೆರೆಯಲ್ಲಿ ಸಂಗ್ರಹಿಸಲಾಗಿದೆ. ಶುಕ್ರವಾರ ಜಿಲ್ಲೆಯ ವಿನೋಭ ನಗರದಲ್ಲಿ ಇರುವ ದಾವಣಗೆರೆ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಕಾರ್ಯಕರ್ತರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ತಮ್ಮ ಆಕಾಂಕ್ಷಿಗಳಿಗೆ ಟಿಕೆಟ್ ನೀಡಬೇಕೆಂದು ತಮ್ಮ ನಾಯಕರ ಪರ ಬ್ಯಾಲೆಟ್ ಪೇಪರ್ನಲ್ಲಿ ಮತ ಚಲಾಯಿಸಿದರು.
ಏಳು ಮತಕ್ಷೇತ್ರಗಳ ಮಾಹಿತಿ ಸಂಗ್ರಹ : ದಾವಣಗೆರೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಈ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತು. ಮೊದಲಿಗೆ ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ, ಹರಿಹರ ಹೀಗೆ ಏಳು ಕ್ಷೇತ್ರಗಳ ಕಾರ್ಯಕರ್ತರ ನಾಡಿ ಮಿಡಿತವನ್ನು ಆಲಿಸಲಾಯಿತು. ಕಾರ್ಯಕರ್ತರ ಅಭಿಪ್ರಾಯ ಪಡೆಯುವ ಉಸ್ತುವಾರಿಯಾಗಿ ದಾವಣಗೆರೆಗೆ ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯರ್ತರ ಕಡೆಯಿಂದ ಬ್ಯಾಲೆಟ್ ಮತಗಳ ಮೂಲಕ ಮಾಹಿತಿ ಕಲೆ ಹಾಕಿ ಅದನ್ನು ಬೆಂಗಳೂರಿಗೆ ರವಾನೆ ಮಾಡಲಾಗುವುದೆಂದು ಮಾಹಿತಿ ನೀಡಿದರು. ಹಾಲಿ ಏಳು ವಿಧಾಸಭಾ ಕ್ಷೇತ್ರಗಳ ಪೈಕಿ 2018 ರಲ್ಲಿ ಐದು ಸ್ಥಾನ ಗೆದ್ದ ಬಿಜೆಪಿ ಟಿಕೆಟ್ ಗಾಗಿ ಬಹುತೇಕ ಕಡೆ ಹೊಸ ಮುಖ ಹಾಗೂ ಯುವಕರು ಮುಂದೆ ಇರುವುದ್ದರಿಂದ 36 ಜನ ಟಿಕೆಟ್ ಆಕಾಂಕ್ಷಿಗಳು ಸಭೆಯಲ್ಲಿ ಭಾಗಿಯಾಗಿದರು.
ಹಾಲಿ ಶಾಸಕರರಲ್ಲಿ ಬಹುತೇಕರಿಗೆ ಟಿಕೆಟ್ ಸಿಗುವುದು ಖಚಿತ : ಹಾಲಿ ಶಾಸಕರರಲ್ಲಿ ಬಹುತೇಕರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ ಎಂದು ಬಿಜೆಪಿ ಮೂಲಗಳಿಂದ ವಿಚಾರ ಕೇಳಿ ಬರುತ್ತಿದೆ. ಅದರೇ ದಾವಣಗೆರೆ ಉತ್ತರ ಕ್ಷೇತ್ರದಿಂದ ಶಾಸಕ ಎಸ್ ಎ ರವೀಂದ್ರನಾಥ ಸ್ವರ್ಧೆಗೆ ಹಿಂದೇಟು ಹಾಕುತ್ತಿರುವುದರಿಂದ ಆಕಾಂಕ್ಷಿಗಳು ಹುಟ್ಟಿಕೊಳ್ಳುವಂತಾಗಿದೆ. ಇನ್ನು ಪಕ್ಷದ ಸಂಘಟನೆಯಲ್ಲಿ ದಾವಣಗೆರೆ ಮೂಲ ಶಕ್ತಿ ಕೇಂದ್ರವಾಗಿದ್ದು, ಮೂಲ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಹಾಗೂ ಮಂಡಲಗಳ ಹೀಗೆ ಮೂರು ಘಟಕಗಳಿಂದ ಚುನಾವಣಾ ಅಭ್ಯರ್ಥಿ ಕುರಿತು ಮಾಹಿತಿ ಸಂಗ್ರಹಕ್ಕೆ ಬಿಜೆಪಿ ಮುಂದಾಗಿದೆ.
ಪ್ರತಿ ವಿಧಾನಸಭಾ ಕೇಂದ್ರಗಳಲ್ಲಿ ಸುಮಾರು 250 ಜನರ ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರ ಹಾಗೂ ಮಂಡಳದ ಸದಸ್ಯರನ್ನು ಮಾಡಲಾಗಿದ್ದು, ಮೂರು ಘಟಕಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಟಿಕೆಟ್ ನೀಡಲು ಈ ಪ್ರಮುಖರ ಅಭಿಪ್ರಾಯವೂ ಒಂದು ಮಾನದಂಡವಾಗಿದೆ. ಜೊತೆಗೆ ಮೂರು ಸುತ್ತಿನ ಸರ್ವೇ ಇದ್ದಂತೆ, ಈ ಎಲ್ಲ ಮಾನದಂಡಗಳನ್ನು ಪರಿಗಣಿಸಿ ಬಿಜೆಪಿ ಪಾರ್ಲಿಮೆಂಟರಿ ಸಮಿತಿ ಟಿಕೆಟ್ ಫೈನಲ್ ಮಾಡುವುದು ಪ್ರಮುಖ ನಡೆಯಾಗಿದೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಬಿಜೆಪಿ ಪಾರ್ಟಿಯಿಂದ ಒಂದು ಜಿಲ್ಲೆಯಲ್ಲಿ ಇಬ್ಬರು ನಾಯಕರು ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯ ಕಲೆ ಹಾಕಲಾಗುತ್ತಿದೆ. ಈಗಾಗಾಲೇ ಸಾಕಷ್ಟು ಜಿಲ್ಲೆಗಳಲ್ಲೂ ಸಭೆಗೆ ಭೇಟಿ ನೀಡಿ ಕಾರ್ಯಕರ್ತರಿಂದ ಆಯಾ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಇದರಂತೆ ಇಂದು ದಾವಣಗೆರೆಯಲ್ಲೂ ಕೂಡ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಅದನ್ನು ಬೆಂಗಳೂರಿಗೆ ಮುಟ್ಟಿಸಲಾಗುವುದು ಎಂದು ತಿಳಿಸಿದರು.
ಮತ ಬ್ಯಾಂಕ್ಗೆ ವಿರೋಧ- ಸಚಿವೆ ಶೊಭಾ ಕರಂದ್ಲಾಜೆ : ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವರು, ಮತ ಬ್ಯಾಂಕಿನ ವೋಲೈಕೆಗೆ ಮುಸ್ಲಿಂರಿಗೆ ಕಾಂಗ್ರೆಸ್ ಪಕ್ಷ ಮೀಸಲಾತಿ ನೀಡಿತ್ತು. ಅದರೆ, ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡುವ ಹಾಗಿಲ್ಲ. ಆದರೆ, ಅದನ್ನು ರದ್ದುಪಡಿಸಿ ಎಲ್ಲರಿಗೂ ನಾವು ನ್ಯಾಯ ಒದಗಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿತ ಸಮಾಜಕ್ಕೆ ಮೀಸಲಾತಿ ನೀಡಬೇಕು. ಆದರೆ, ಕಾಂಗ್ರೆಸ್ ಸಂವಿಧಾನ ಬಾಹಿರವಾಗಿ ಮೀಸಲಾತಿ ನೀಡಿತ್ತು. ಅದನ್ನು ತೆಗೆದುಹಾಕಿ ಎಲ್ಲರಿಗೂ ನ್ಯಾಯ ಒದಗಿಸಿದ್ದೇವೆ. ಲಿಂಗಾಯಿತ, ಒಕ್ಕಲಿಗ ಹಾಗೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಲಾಗಿದೆ. ಇದು ಸಂವಿಧಾನ ಅಡಿಯಲ್ಲಿ ಮಾಡಿದ ಕೆಲಸ. ಆದರೂ, ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ. ಭೋವಿ, ಕೊರಚ ಸಮುದಾಯಕ್ಕೆ ಅನ್ಯಾಯ ಆಗಿಲ್ಲ. ಧ್ವನಿ ಇಲ್ಲದಂತವರಿಗೆ ಮೀಸಲಾತಿ ಸಿಗುತ್ತಿರಲಿಲ್ಲ. ಇವತ್ತು ಒಳ ಮೀಸಲಾತಿ ತಂದು ನ್ಯಾಯ ಕೊಟ್ಟಿದ್ದು ನಮ್ಮ ಸರ್ಕಾರ ಎಂದು ಅವರು ಹೇಳಿದರು.
ಕಾಂಗ್ರೆಸ್ನ ಷಡ್ಯಂತ್ರದಿಂದ ತಪ್ಪು ಸಂದೇಶ ಹೋಗುತ್ತಿದ್ದು, ನಮ್ಮ ಸರ್ಕಾರ ಎಲ್ಲ ಸಮಾಜಕ್ಕೆ ಧ್ವನಿ ಕೊಡುವ ಕೆಲಸ ಮಾಡಿದೆ. ಹಲವು ವರ್ಷಗಳ ಬೇಡಿಕೆ ಇದ್ದ ಒಳಮೀಸಲಾತಿ ಜಾರಿಗೆ ತರಲಾಗಿದೆ. ಈವರೆಗೆ ಯಾರೂ ಸಹ ಈ ಧೈರ್ಯ ತೋರಿರಲಿಲ್ಲ. ಒಳಮೀಸಲಾತಿ ನೀಡಿ ಬಿಜೆಪಿ ನ್ಯಾಯ ಕೊಟ್ಟಿದೆ. ಈ ಹಿಂದೆ ರಾಜ್ಯದ ಜನತೆ ಹೆಚ್ಚಿನ ಸೀಟು ಕೊಟ್ಟಿದ್ದರು. ಆದರೆ, ಬಹುಮತ ಕೊಟ್ಟಿರಲಿಲ್ಲ. ಈ ಬಾರಿ ಚುನಾವಣೆಯಲ್ಲಿ ಬಹುಮತ ಗಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಪ್ರಧಾನಿಯವರು ಎಲ್ಲಿಯೇ ಪ್ರವಾಸ ಮಾಡಲಿ, ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ದೇಶದ ರಕ್ಷಣೆ, ಅಭಿವೃದ್ಧಿ ಕೆಲಸಕ್ಕಾಗಿ ಬಿಜೆಪಿ ಬೇಕಿದೆ. ಪ್ರಧಾನಿಯವರ ಕೆಲಸ ಹಳ್ಳಿ ಹಳ್ಳಿಗೂ ತಲುಪಬೇಕು, ಈ ಹಿನ್ನೆಲೆಯಲ್ಲಿ ರಾಜ್ಯದ ಜನ ಬಿಜೆಪಿಗೆ ಬಹುಮತ ನೀಡುತ್ತಾರೆ ಎಂಬ ನಂಬಿಕೆ ಇದೆ. ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ರಾಜ್ಯ ಹಾಗೂ ದೇಶದ ಜನ ಮತ್ತೊಮ್ಮೆ ಶಕ್ತಿ ತುಂಬಲಿದ್ದಾರೆ ಎಂಬ ವಿಶ್ವಾಸ ಕೂಡ ಇದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಬೂತ್ ಮಟ್ಟದ ಕಾರ್ಯಕ್ರಮಗಳನ್ನು ಕೇವಲ ಚುನಾವಣೆ ಸಲುವಾಗಿ ಮಾಡುವುದಿಲ್ಲ. ನಿರಂತರವಾಗಿ ನಮ್ಮ ಕಾರ್ಯಕರ್ತರು ಫೀಲ್ಡ್ನಲ್ಲಿ ಇರುತ್ತಾರೆ. ಅವರು ಸರ್ಕಾರ ಜಾರಿಗೆ ತಂಡ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುತ್ತಾರೆ. ಪಾರ್ಟಿಯ ಅಪೇಕ್ಷೆ, ಕಾರ್ಯಕರ್ತರ ಅಭಿಪ್ರಾಯ ಕೇಳಲು ಇಂದು ಚುನಾವಣೆ ನಡೆಸಿದ್ದೇವೆ. ಬೂತ್ ಪ್ರಮುಖರು, ಕಾರ್ಯಕರ್ತರು ತಮ್ಮ ಅಭಿಪ್ರಾಯ ತಿಳಿಸಲು ಒಂದು ಅವಕಾಶ ನೀಡಲಾಗಿದೆ. ರಾಜ್ಯದಿಂದ ಅಂತಿಮ ಹೆಸರುಗಳು ಕೇಂದ್ರಕ್ಕೆ ಹೋಗಿ ಬಳಿಕ ಸೀಟು ಹಂಚಿಕೆ ಆಗುತ್ತದೆ ಎಂದರು.
ಇದನ್ನೂ ಓದಿ : ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಾಲಿನ ಪ್ರತಿಷ್ಠೆಯ ಕಣ: ವಿಷ್ಣು- ಶಿವನ ನಾಡು ಹರಿಹರದಲ್ಲಿ ಯಾರ ಕೊರಳಿಗೆ ಜಯದ ಮಾಲೆ?