ದಾವಣಗೆರೆ: ಬ್ಯಾಂಕ್ ದರೋಡೆ ಮಾಡಲು ಯತ್ನಿಸುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ನಗರದಲ್ಲಿ ಅಪರಾಧ ತಡೆಗಾಗಿ ವಿಶೇಷ ಗಸ್ತು ನಡೆಸುತ್ತಿರುವ ವೇಳೆ ಮೂವರು ಕಳ್ಳರು ಸಿಕ್ಕಿಬಿದ್ದಿದ್ದಾರೆ. ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಬಳಿ ಈ ಘಟನೆ ನಡೆದಿದೆ. ಕಳೆದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಶ್ರೀ ಧನಂಜಯ ರಾಜ ಅರಸ್ ಹಾಗೂ ಶ್ರೀ ಸುರೇಶ ಎಲ್ ಅವರು ಬ್ಯಾಂಕ್ ದರೋಡೆಗೆ ಯತ್ನಿಸುತ್ತಿದ್ದ, ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಸ್ತು ತಿರುಗುವ ವೇಳೆ ಪೊಲೀಸ್ ಸಿಬ್ಬಂದಿಗೆ ಆಕ್ಸಿಸ್ ಬ್ಯಾಂಕ್ ಕಾಂಪೌಂಡ್ ಒಳಗೆ ಮಷಿನ್ ಶಬ್ದ ಕೇಳಿ ಬಂದಿದೆ. ಬ್ಯಾಂಕ್ ಆವರಣಕ್ಕೆ ಹೋಗಿ ನೋಡಿದಾಗ, ಬ್ಯಾಂಕ್‌ನ ಬಲಭಾಗದಲ್ಲಿ ಮೂವರು ವ್ಯಕ್ತಿಗಳು ಕಂಡುಬಂದಿದ್ದಾರೆ. ಪೊಲೀಸರ ಕೈಗೆ ಅಣ್ಣೇಶಿ ಎಂಬ ಆರೋಪಿ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ಆರೋಪಿಗಳಾದ ರಘು ಮತ್ತು ರಮೇಶ್ ಪರಾರಿಯಾಗಿದ್ದರು.
ಮತ್ತಿಬ್ಬರು ಖದೀಮರನ್ನು ಬಂಧಿಸಿದ್ದೇ ಸಾಹಸ: ರಘು ಮತ್ತು ರಮೇಶ್ ಪೊಲೀಸರನ್ನು ನೋಡಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದತ್ತ ಓಡಿ ಹೋಗಿದ್ದಾರೆ ಎಂದು ಆರೋಪಿ ಅಣ್ಣೇಶಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಈ ವಿಚಾರವನ್ನು ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಧನಂಜಯ ರಾಜ ಅರಸ್ ಹಾಗೂ ಸುರೇಶ, ಬಡಾವಣೆ ಠಾಣೆಯ ಪಿ.ಐ ಧನಂಜಯ್ ಅವರಿಗೆ ಈ ವಿಚಾರ ತಿಳಿಸಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ ಮೃತದೇಹ ಸಿಗದ ಕಾರಣ ಶೋಧ ಕಾರ್ಯ ಸ್ಥಗಿತ
ಘಟನಾ ಸ್ಥಳಕ್ಕೆ ಆಗಮಿಸಿದ ಪಿಐ ಧನಂಜಯ್ ಅವರು ಪೊಲೀಸ್ ಜೀಪಿನಲ್ಲಿ ತೆರಳಿ ಪಲ್ಸರ್ 220 ಬೈಕ್ ಇರುವುದನ್ನು ಖಚಿತ ಪಡಿಸಿಕೊಂಡು, ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ನಲ್ಲಿ ಬೈಕ್ ಬಳಿ ನಿಂತಿದ್ದ ರಘು ಮತ್ತು ರಮೇಶ್ ಅವರನ್ನು ಬಂಧಿಸಿದ್ದಾರೆ. ಬಡಾವಣೆ ಪೊಲೀಸರು ಗುನ್ನೆ ನಂಬರ್ 129/2022 ಕಲಂ 457, 380, 511 ಐಪಿಸಿ ರೀತಿ ಪ್ರಕರಣ ದಾಖಸಿಕೊಂಡು ತನಿಖೆ ಕೈಗೊಂಡಿದ್ದಾರೆ.