ದಾವಣಗೆರೆ : ಕೊರೊನಾ ಸೋಂಕಿನ ಉಲ್ಬಣದ ನಡುವೆ ಜಿಲ್ಲೆಯಲ್ಲಿ ಆಮ್ಲಜನಕದ ಅಭಾವ ಕೂಡ ಎದುರಾಗಿದೆ. ಆಕ್ಸಿಜನ್ ಬೆಡ್ಗಾಗಿ ಆಸ್ಪತ್ರೆ ಮುಂದೆ ಸೋಂಕಿತರು ಸಾಲಿನಲ್ಲಿ ನಿಲ್ಲುವ ಸ್ಥಿತಿ ಇದೆ.
ಹೀಗೆಯೇ ರೋಗಿಯೊಬ್ಬರು ಆಮ್ಲಜನಕದ ಕೊರತೆಯಿಂದ ನರಳುತ್ತಿದ್ದರು. ಇದನ್ನರಿತ ಅಂತಾರಾಷ್ಟ್ರೀಯ ಕ್ರೀಡಾಪಟುವೊಬ್ಬರು ಸೋಂಕಿತ ರೋಗಿಯ ಜೀವ ಉಳಿಸಿ ಪ್ರಶಂಸೆಗೆ ಪಾತ್ರಳಾಗಿದ್ದಾರೆ.
ಅಂತಾರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಹಬೀಬ್ ಉನ್ನಿಸಾ ದಾವಣಗೆರೆ ತಾಲೂಕಿನ ಕಾಡಜ್ಜಿ ಗ್ರಾಮದ ರೋಗಿಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿ ಜೀವ ಉಳಿಸಿದ್ದಾರೆ.
ದಾವಣಗೆರೆಯಲ್ಲಿ ಕೋವಿಡ್ ಸೋಂಕಿತ ರೋಗಿಗಳಿಗೆ ಆಕ್ಸಿಜನ್ ಸಿಗದಿರುವ ಕಾರಣ ಜಿಲ್ಲಾಸ್ಪತ್ರೆ ವೈದ್ಯರು ಹೊರಗಿನಿಂದ ಆಕ್ಸಿಜನ್ ತರುವಂತೆ ಹೇಳುತ್ತಿದ್ದಾರೆ ಎಂದು ದಾವಣಗೆರೆ ಜೆಡಿಎಸ್ ಕಾರ್ಯದರ್ಶಿ ಅಮಾನುಲ್ಲಾ ಖಾನ್ ಆರೋಪ ಮಾಡಿದ್ದಾರೆ.
ಸೋಂಕಿತ ವ್ಯಕ್ತಿಯನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೂಡಲೇ ಆಕ್ಸಿಜನ್ ವ್ಯವಸ್ಥೆ ಮಾಡುವಂತೆ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಯಿಂದ ಕೇಸ್ ಪೇಪರ್ನಲ್ಲಿ ಉಲ್ಲೇಖ ಮಾಡಲಾಗಿತ್ತಂತೆ. ದಿನಾಂಕ 12-5-2021ರಂದು ಸೋಂಕಿತ ವ್ಯಕ್ತಿಯ ಸಂಬಂಧಿಕರಿಗೆ ಆಕ್ಸಿಜನ್ ತರಲು ಹೇಳಿದ್ದಾರಂತೆ.
ಆಗ ಎಲ್ಲೂ ಆಮ್ಲಜನಕ ಸಿಗದ ಕಾರಣ ಅಂತಾರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಹಬೀಬ್ ಉನ್ನಿಸಾ ಅವರನ್ನು ಸಂಪರ್ಕಿಸಿದಾಗ ಆಮ್ಲಜನಕ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದ್ದಾರೆ.