ದಾವಣಗೆರೆ: ಹರಿಹರದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ 18 ವರ್ಷದ ಗರ್ಭಿಣಿ ಸಂಪರ್ಕಕ್ಕೆ ಬಂದಿದ್ದ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಹರಿಹರದ ಅಗಸರ ಬೀದಿಲ್ಲಿರುವ ಈಕೆಯ ಗಂಡನ ಮನೆಯ 6 ಹಾಗೂ ರಾಜನಹಳ್ಳಿಯಲ್ಲಿರುವ ತವರು ಮನೆಯ ಮೂವರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ನಾಲ್ವರು ಬಾಲಕಿಯರು, ಮೂವರು ಮಹಿಳೆಯರು, ಇಬ್ಬರು ಪುರುಷರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 265ಕ್ಕೇರಿದ್ದು, 220 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 38 ಸಕ್ರಿಯ ಪ್ರಕರಣಗಳಿದ್ದು, 7 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಗರ್ಭಿಣಿ ಮಹಿಳೆ ಆಸ್ಪತ್ರೆಗೆ ತಪಾಸಣೆಗೆ ಬಂದಾಗ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಬಳಿಕ ಆಕೆಗೆ ಪಾಸಿಟಿವ್ ಬಂದಿದೆ. ಈಕೆ ಸಂಪರ್ಕದಲ್ಲಿರುವ 22 ಮಂದಿಯ ಸ್ವ್ಯಾಬ್ ಸಂಗ್ರಹಿಸಲಾಗಿದೆ. ಗರ್ಭಿಣಿ ಮಹಿಳೆಯು ದಾವಣಗೆರೆಯ ಬಾಷಾನಗರ, ಜಾಲಿನಗರ ಸೇರಿದಂತೆ ಇಲ್ಲಿನ ಕೆಲವು ಪ್ರದೇಶಗಳಿಗೆ ಬಂದು ಹೋಗಿದ್ದು, ಮದುವೆಗೆ ಹೋದ ವೇಳೆ ಸೋಂಕು ತಗುಲಿರುವ ಕುರಿತಂತೆ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದರು.
ಬೆಲ್ಲದ ವ್ಯಾಪಾರಿ ಟ್ರಾವೆಲ್ ಹಿಸ್ಟರಿ ಶೋಧ: ಚನ್ನಗಿರಿಯ ಗೌಡರ ಬೀದಿಯ (ಪಿ-8806) ಬೆಲ್ಲದ ವ್ಯಾಪಾರಿಗೆ ಕೊರೊನಾ ತಗುಲಿದ್ದು, ಈತ ಶಿವಮೊಗ್ಗ ಸೇರಿದಂತೆ ಬೇರೆ-ಬೇರೆ ಜಿಲ್ಲೆಗಳಿಗೆ ಹೋಗಿ ಬಂದಿರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಸರ್ವೆಲೆನ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈತ ಓಡಾಡಿರುವ ಪ್ರದೇಶಗಳು ಹಾಗೂ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯವೂ ನಡೆಯುತ್ತಿದೆ. ಶಿವಮೊಗ್ಗದಲ್ಲಿ ಮೃತಪಟ್ಟ ಮಹಿಳೆಯ ಮನೆಯು ಈ ವ್ಯಾಪಾರಿಯ ಮನೆ ಹತ್ತಿರ ಬರುವ ಕಾರಣ ಆಕೆಯಿಂದ ಸೋಂಕು ವಕ್ಕರಿಸಿದೆಯಾ ಎಂಬ ಬಗ್ಗೆ ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.