ದಾವಣಗೆರೆ : ಕೊರೊನಾ ಸೋಂಕಿನ ವಿರುದ್ಧ ಪೊಲೀಸರು ಯುದ್ಧಭೂಮಿಯಲ್ಲಿ ಹೋರಾಡುವ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಜನರಿಂದಲೂ ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯ ಹಾಗೂ ಪ್ರಶಂಸೆ ವ್ಯಕ್ತವಾಗುತ್ತಿರುವುದು ನಮ್ಮ ಮನೋಸ್ಥೈರ್ಯ ಹೆಚ್ಚಿಸಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಹೇಳಿದ್ದಾರೆ.
ನಗರದ ಎಸ್ಪಿ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, ಈಗಿನ ಪರಿಸ್ಥಿತಿ ತುಂಬಾ ಕ್ಲಿಷ್ಟಕರವಾಗಿದೆ. ಸುಮಾರು ಐದು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಎಲ್ಲಾ ಕಡೆ ಪೊಲೀಸ್ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಪೊಲೀಸರು ಜನರ ರಕ್ಷಣೆಯ ಜೊತೆಗೆ ಸ್ವಯಂ ರಕ್ಷಣೆಯತ್ತಲೂ ಗಮನಹರಿಸಿ ಜವಾಬ್ದಾರಿಯಿಂದ ಸೇವೆ ಸಲ್ಲಿಸಬೇಕಾಗಿದೆ. ಈಗ ಜನರಿಗೂ ಕೊರೊನಾ ಡೇಂಜರಸ್ ಎಂಬುದು ಗೊತ್ತಾಗಿದೆ ಎಂದರು.
ಇತ್ತೀಚೆಗೆ ಪೊಲೀಸ್ ಇಲಾಖೆಯವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಅವರ ಕುಟುಂಬದವರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ಆಗಿವೆ. ಪ್ರತಿಯೊಬ್ಬರು ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಸಬೇಕು. ಈ ಮೂರು ಅಂಶ ಪಾಲಿಸಿದ್ರೆ ಕೊರೊನಾದಿಂದ ದೂರ ಉಳಿಯಬಹುದು ಎಂದರು.
ಲಾಕ್ಡೌನ್ ಆದ ಬಳಿಕ ಅಪರಾಧ ಪ್ರಕರಣ ಹೆಚ್ಚಾಗುತ್ತಿವೆ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ. ಅಲರ್ಟ್ ಆಗುವಂಥ ಸಂದರ್ಭವಾಗಲಿ, ಘಟನೆಗಳಾಗಲಿ ನಡೆದಿಲ್ಲ. ಜನರು ಕೆಲಸ ಇಲ್ಲದಿರುವುದರಿಂದ ಕ್ರೈಂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲರ್ಟ್ ಆಗುವ ಪರಿಸ್ಥಿತಿ ಎದುರಾದರೆ ತಿಳಿಸುತ್ತೇವೆ ಎಂದರು.