ದಾವಣಗೆರೆ: ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ವೈಷ್ಣವಿ ಚೇತನ ಕಾಲೇಜು ವಸತಿ ನಿಲಯದಲ್ಲಿ ನಡೆದಿದೆ.
ಸಿಂಧು (17) ನೇಣಿಗೆ ಶರಣಾದ ಬಾಲಕಿ. ಮೃತ ಬಾಲಕಿ ಪಿಯುಸಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಿವಾಸಿ ಎಂದು ತಿಳಿದು ಬಂದಿದೆ.
ಕಳೆದ ಕೆಲ ತಿಂಗಳಿಂದ ಕಾಲೇಜು ವಸತಿ ನಿಲಯದಲ್ಲಿದ್ದ ಬಾಲಕಿ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಕಾಲೇಜು ಆಡಳಿತ ಮಂಡಳಿ ಮೃತ ಸಿಂಧು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದೆ. ಮಾಹಿತಿ ತಿಳಿದು ಕಾಲೇಜಿನತ್ತ ಇಡೀ ಕುಟುಂಬವೇ ದೌಡಾಯಿಸಿದೆ. ಮಗಳ ಸಾವು ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಘಟನೆ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.