ದಾವಣಗೆರೆ: ಕ್ಷುಲ್ಲಕ ಕಾರಣಕ್ಕಾಗಿ ಎರಡು ಕೋಮಿನ ಇಬ್ಬರು ಯುವಕರ ಮಧ್ಯ ನಡೆದಿದ್ದ ಗಲಾಟೆ ನಂತರ ಗುಂಪು ಘರ್ಷಣೆಯಾಗಿ ಮಾರ್ಪಟ್ಟಿತ್ತು. ಈ ವೇಳೆ ಇಬ್ಬರು ಗಾಯಗೊಂಡಿದ್ದರು. ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದ ಜಿಗಳಿಯಲ್ಲಿ ಎರಡು ದಿನಗಳ ಹಿಂದೆ ಪ್ರಕರಣ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿವೆ.
ಸೋಮವಾರ ಸಂಜೆ ಇಬ್ಬರು ಯುವಕರು ನಡುವೆ ಗಲಾಟೆ ನಡೆದಿತ್ತು. ಒಂದು ಕೋಮಿನ ಯುವಕನಿಗೆ ಇನ್ನೊಂದು ಕೋಮಿನ ಯುವಕ ಚಾಕುವಿನಿಂದ ಇರಿದಿದ್ದನು. ದಾಳಿಗೆ ಒಳಗಾಗಿ ಗಾಯಗೊಂಡ ಯುವಕ ಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣ ಸಂಬಂಧ ಗಾಯಾಳುವಿನ ಸಹೋದರ ಮೊಹಮ್ಮದ್ ಮುಬಾರಕ್ ಅವರು ಅಭಿ, ರಾಕೇಶ್, ಆಕಾಶ್, ಶ್ರೀನಿವಾಸ್, ಕಾರ್ತಿಕ್, ಸುಹಾಸ್, ಭರತ್, ಹರೀಶ್, ಪಿರಾಜೀವ್ ಮತ್ತು ಕಜ್ಜರಿ ಹರೀಶ್ ಅವರುಗಳ ವಿರುದ್ಧ ಕೊಲೆ ಪ್ರಯತ್ನದ ದೂರು ನೀಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೀವ್ ಎಂಬುವವರು ಆಸೀಫ್, ಇರ್ಫಾನ್, ಸಾಬೀರ್ ಅಲಿ, ಸೈಯದ್ ಖಾಲೀದ್, ಸಮೀರ್, ಬರ್ಕತ್, ಎಂಬುವವರ ಮೇಲೆ ಜಾತಿ ನಿಂದನೆ ದೂರು ಸಲ್ಲಿಸಿದ್ದಾರೆ.
ಈ ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಮಲೇಬೆನ್ನೂರು ಠಾಣೆಯ ಸಿಬ್ಬಂದಿ, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇನ್ನು, ಪಟ್ಟಣ ಸಂಪೂರ್ಣ ಶಾಂತಿಯುತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಮುಂದುವರೆಸಲಾಗಿದೆ. ಎಎಸ್ಪಿ ಕನ್ನಿಕಾ ಸಿಕ್ರಿವಾಲ್, ಸಿಪಿಐ ಸತೀಶ್ ಅವರು ಪಟ್ಟಣದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ: ಕುಷ್ಟಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಪತ್ತೆ