ದಾವಣಗೆರೆ: ಅಮರನಾಥ ಯಾತ್ರೆಗೆ ತೆರಳಿದ್ದ ಚನ್ನಗಿರಿಯ 08 ಜನ ಸುರಕ್ಷಿತವಾಗಿಗಿದ್ದಾರೆಂದು ಚನ್ನಗಿರಿ ಶಾಸಕ ಬಸವರಾಜ್ ವಿ ಶಿವಗಂಗಾ ಖಚಿತಪಡಿಸಿದ್ದಾರೆ. ಅಮರನಾಥದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಭೂಕುಸಿತ ಸಂಭವಿಸುತ್ತಿರುವುದರಿಂದ ಸಾಕಷ್ಟು ಯಾತ್ರಾರ್ಥಿಗಳು ಆತಂಕದಲ್ಲಿದ್ದಾರೆ. ಈಗಾಗಲೇ ದಾವಣಗೆರೆ ನಗರದ ನಾಲ್ಕು ಜನ ಮಹಿಳೆಯರು ಹಿಂದಿರುಗಿದ್ದಾರೆ. ಜಿಲ್ಲೆಯ ಚನ್ನಗಿರಿಯ 08 ಜನ ಅಮರನಾಥ ಯಾತ್ರೆಗೆ ತೆರಳಿದ್ದರಿಂದ ಅವರ ಕುಟುಂಬದವರು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣ ಆಗಿತ್ತು.
ಈ ವೇಳೆ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜ್ ವಿ ಶಿವಗಂಗಾ ಅವರು ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಕ್ಷೇತ್ರದಿಂದ ಈ ಬಾರಿ ಎಷ್ಟು ಮಂದಿ ಅಮರನಾಥ ಯಾತ್ರೆಗೆ ತೆರಳಿದ್ದಾರೆ ಎಂಬುದರ ಕುರಿತು ಮಾಹಿತಿ ಪಡೆದು ಅವರ ನೆರವಿಗೆ ಬಂದಿದ್ದಾರೆ. ಯಾತ್ರಾರ್ಥಿಗಳಿಗೆ ಫೋನ್ ಕರೆಯಿಂದ ಸಂಪರ್ಕಿಸುವ ಮೂಲಕ ಕ್ಷೇತ್ರದಿಂದ ಅಮರನಾಥ ಯಾತ್ರೆಗೆ ತೆರಳಿದ್ದವರನ್ನು ಸಂಪರ್ಕ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ಅಮರನಾಥ ಸೇರಿದಂತೆ ಉತ್ತರ ಭಾರತ ಪ್ರವಾಸದಲ್ಲಿರುವವರಿಗೆ ಶುಭ ಕೋರಿ ಯಾವುದೇ ಸಮಯದಲ್ಲಿ ನಿಮಗೆ ಸಣ್ಣ ಸಮಸ್ಯೆಯಾದರೂ ನನಗೆ ನೇರವಾಗಿ ಫೋನ್ ಕರೆ ಮಾಡಿ ಸಂಪರ್ಕಿಸಿ ಎಂದು ಧೈರ್ಯ ತುಂಬಿದ್ದಾರೆ. ಈಗಾಗಲೇ ಚನ್ನಗಿರಿ ತಾಲೂಕಿನನಿಂದ ಅಜ್ಜಿಹಳ್ಳಿಯ ಪ್ರಕಾಶ್, ವಸಂತ ಕುಮಾರ್ ರೇವಣ್ಣ, ಆದಿತ್ಯ, ಪ್ರಹ್ಲಾದ್, ನಲ್ಲೂರಿನ ಸತೀಶ್, ಚನ್ನಗಿರಿ ಪಟ್ಟಣದ ರಂಗಯ್ಯ, ತಿಪ್ಪಗೊಂಡನಹಳ್ಳಿಯಿಂದ ಮಂಜುನಾಥ್ ಡಿ ಎಂ, ಹಳ್ಳಿಹಾಳು(ಪೆನ್ನಸಮುದ್ರ) ಗ್ರಾಮದ ಜಿ ಎಸ್ ನಾಗರಾಜು ಅವರು ಇದೇ 7 ರಂದು ಶ್ರೀನಗರಕ್ಕೆ ಹೋಗಿ ಅಲ್ಲಿಂದ ಅಮರನಾಥಕ್ಕೆ ತೆರಳಿದ್ದರು.
ಶಾಸಕ ಶಿವಗಂಗಾ ಅವರು ಯಾತ್ರಾರ್ಥಿಗಳನ್ನು ಸಂಪರ್ಕಿಸಿದಾಗ, ದೇವರ ದರ್ಶನ ಪಡೆದು ಶ್ರೀನಗರಕ್ಕೆ ಆಗಮಿಸಿ ಸುರಕ್ಷಿತವಾಗಿದ್ದೇವೆ ಎಂದು ಮಾಹಿತಿ ಸಿಕ್ಕಿದೆ. ಎಂಟು ಜನ ಯಾತ್ರಾರ್ಥಿಗಳು ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ಆಗಮಿಸಿ ಆ ಮೂಲಕ ಕರ್ನಾಟಕಕ್ಕೆ ವಾಪಸ್ ಬರುತ್ತಿದ್ದಾರೆಂದು ಶಾಸಕರಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಅಮರನಾಥ ಯಾತ್ರಾರ್ಥಿ ಹೇಳಿದ್ದೇನು.. ಅಮರನಾಥ ಯಾತ್ರಾರ್ಥಿಯಾದ ಪ್ರಕಾಶ್ ಅವರನ್ನು ಸಂಪರ್ಕಿಸಿದಾಗ, ಶಾಸಕರಾದ ಬಸವರಾಜು ವಿ ಶಿವಗಂಗಾ ಅವರು ನಮಗೆ ಕರೆ ಮಾಡಿದ್ದರು. ನಮ್ಮ ಯೋಗಕ್ಷೇಮ ವಿಚಾರಿಸಿದರು. ಅವರು ಕರೆ ಮಾಡಿ ಎಲ್ಲರ ಬಗ್ಗೆ ಮಾಹಿತಿ ಪಡೆದರು. ಶಾಸಕರಿಗೆ ನಮ್ಮ ಬಗ್ಗೆ ಕಾಳಜಿ ನೋಡಿ ನಮಗೆ ತುಂಬಾ ಸಂತೋಷವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: Amarnath Yatra: ಸ್ವಂತ ಹಣದಲ್ಲಿ ಹೆಲಿಕ್ಯಾಪ್ಟರ್ ಮೂಲಕ ಶ್ರೀನಗರ ತಲುಪಿದ ಧಾರವಾಡದ ಯಾತ್ರಿಗಳು!