ಪುತ್ತೂರು: ಜೀವನ ಮೌಲ್ಯಗಳನ್ನು ಎತ್ತಿ ಹಿಡಿದು ಗಟ್ಟಿಗೊಳಿಸುವಲ್ಲಿ ಯಕ್ಷಗಾನದ ಕೊಡುಗೆ ಮಹತ್ತರವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿಭಾಗ ಕಾರ್ಯವಾಹ ನಾ.ಸೀತಾರಾಮ ಅಭಿಪ್ರಾಯಪಟ್ಟರು.
ನರಿಮೊಗರು ಗ್ರಾಮದ ಕೊಡಿನೀರುನಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ “ಸಂಪೂರ್ಣ ಶ್ರೀ ದೇವಿ ಮಹಾತ್ಮೆ” ಸೇವಾ ಬಯಲಾಟದ ಅಂಗವಾಗಿ ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೂ ಧರ್ಮದ ಮೌಲ್ಯಗಳು, ಬದುಕಿನ ಉತ್ಥಾನ, ವಿಕಾಸವನ್ನು ಸಮರ್ಥವಾಗಿ ಸಮಾಜದಲ್ಲಿ ಗಟ್ಟಿಗೊಳಿಸುವಲ್ಲಿ ಯಕ್ಷಗಾನ ಕಲೆ ಪ್ರಭಾವ ಬೀರಿದೆ. ಇದಕ್ಕೆ ಇನ್ನಷ್ಟು ಬುನಾದಿ ಹಾಕುವ ನಿಟ್ಟಿನಲ್ಲಿ ವೆಂಕಟರಮಣ ಕಳುವಾಜೆ ಹಾಗೂ ಎ.ವಿ.ನಾರಾಯಣ ಕುಟುಂಬಸ್ಥರು ಏರ್ಪಡಿಸಿದ ಈ ಕಾರ್ಯ ಶ್ಲಾಘನೀಯ ಎಂದರು.
ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲಚಕ್ರದಲ್ಲಿ ನಮಗೆ ಒದಗಿ ಬರುವ ಅವಕಾಶಗಳನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಬರಬೇಕು. ಈ ನಿಟ್ಟಿನಲ್ಲಿ ಎ.ವಿ.ನಾರಾಯಣ ಅವರ ಕುಟುಂಬಕ್ಕೆ ಒದಗಿದ ಈ ಸೇವೆಯಿಂದ ಊರು ಸಮೃದ್ಧಿಗೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಯಕ್ಷಗಾನ ಕಲಾವಿದ ಶ್ರೀಧರ ಭಂಡಾರಿ, ಪ್ರಸಿದ್ಧ ಯಕ್ಷಗಾನ ಭಾಗವತೆ ಭವ್ಯಶ್ರೀ ಹರೀಶ್ ಕುಲ್ಕುಂದ ಹಾಗೂ ವೀರಮಂಗಲ ಶ್ರೀಕೃಷ್ಣ ಕಲಾಕೇಂದ್ರದ ವಿದ್ವಾನ್ ಗೋಪಾಲಕೃಷ್ಣ ಅವರನ್ನು ಎ.ವಿ.ನಾರಾಯಣ ಕುಟುಂಬಸ್ಥರು ಸನ್ಮಾನಿಸಿದರು.