ಮಂಗಳೂರು: ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್ನಲ್ಲಿ ಕಲಾವಿದರಿಗಾಗಿ ಸಹಾಯಧನ ಘೋಷಿಸಲಾಗಿದೆ. ಆದರೆ, ಅದನ್ನು ಪಡೆಯಲು ವಯೋಮಿತಿ ನಿಗದಿಪಡಿಸಿರುವುದು ಯಕ್ಷಗಾನ ಕಲಾವಿದರ ಅಸಮಧಾನಕ್ಕೆ ಕಾರಣವಾಗಿದೆ.
ಕೊರೊನಾ ಹರಡಲು ಪ್ರಾರಂಭವಾದ ಬಳಿಕ ಯಕ್ಷಗಾನ ಮೇಳಗಳು ಸ್ಥಗಿತಗೊಂಡು, ಕಲಾವಿದರ ಪರಿಸ್ಥಿತಿ ಅಯೋಮಯವಾಗಿದೆ. ಕಳೆದ ಬಾರಿ ಲಾಕ್ ಡೌನ್ನಲ್ಲಿ ಆನ್ಲೈನ್ ಯಕ್ಷಗಾನ ಪ್ರದರ್ಶನ ನೀಡಲಾಗಿತ್ತು. ಆದರೆ, ಅದರಿಂದ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನ ಇಲ್ಲದಿರುವುದರಿಂದ ಮೇ ತಿಂಗಳವರೆಗೆ ಶ್ರಮಪಟ್ಟು ದುಡಿದರೆ ಕಲಾವಿದರ ಜೀವನ ಸಾಗಬಹುದು. ಆದರೆ, ಈ ಬಾರಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮೇಳಗಳು ನಡೆಸಲು ಸಾಧ್ಯವಾಗದೇ ಜೀವನದ ಬಂಡಿ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿ ಕಲಾವಿದರು ಇದ್ದರು. ಈ ವೇಳೆ, ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಕಲಾವಿದರಿಗೆ ಕೊಂಚ ಸಮಧಾನ ನೀಡಿತ್ತು. ಆದರೆ, ಪ್ಯಾಕೇಜ್ ಸಹಾಯಧನ ಪಡೆಯಲು ವಯೋಮಿತಿ ನಿಗದಿಪಡಿಸಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಸರ್ಕಾರದ ವಿಶೇಷ ಪ್ಯಾಕೇಜ್ನ ಧನ ಸಹಾಯ ಪಡೆಯಲು ಕಲಾವಿದರಿಗೆ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಇದರಿಂದ ಯಕ್ಷಗಾನ ಕಲಾವಿದರಿಗೆ ಸಮಸ್ಯೆಯಾಗುತ್ತಿದೆ. ಕರಾವಳಿ ಭಾಗದಲ್ಲಿ 15 ರ ಹರೆಯದಲ್ಲೇ ಯಕ್ಷಗಾನ ಮೇಳ ಸೇರುವ ಯುವ ಕಲಾವಿದರಿದ್ದಾರೆ. ಸಹಾಯಧನ ಪಡೆಯಲು 35 ವರ್ಷ ನಿಗದಿಪಡಿಸಿರುವುದು ಯುವ ಕಲಾವಿದರಿಗೆ ಸರ್ಕಾರದ ಸೌಲಭ್ಯ ಸಿಗದಂತೆ ಮಾಡಿದೆ. ಹಾಗಾಗಿ, ವಯೋಮಿತಿ ಇಳಿಸುವಂತೆ ಕಲಾವಿದರು ಆಗ್ರಹಿಸಿದ್ದಾರೆ.
ಓದಿ : ವೃದ್ಧಾಶ್ರಮಕ್ಕೆ 1ಲಕ್ಷ ರೂ. ದೇಣಿಗೆ ನೀಡಿ 42ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ