ಮಂಗಳೂರು: ಕೊರೊನಾ ಸಂಕಷ್ಟದ ನಡುವೆ ಆನ್ಲೈನ್ ಕ್ಲಾಸ್ಗಳ ಬಗ್ಗೆ ಚರ್ಚೆ ನಡೆಯುತ್ತದೆ. ಕೆಲವೊಂದು ಕಡೆಗಳಲ್ಲಿ ಈಗಾಗಲೇ ಆನ್ಲೈನ್ ಕ್ಲಾಸ್ಗಳು ಆರಂಭವಾಗಿವೆ. ಈ ನಡುವೆ ನಗರದ ಸುರತ್ಕಲ್ನಲ್ಲಿರುವ ಎನ್ಐಟಿಕೆ ಪ್ರೊಫೆಸರೊಬ್ಬರು ಮಂಗಳೂರಿನಲ್ಲಿದ್ದುಕೊಂಡೇ ಇಂಡೋನೇಷ್ಯಾದ ವಿದ್ಯಾರ್ಥಿಗಳಿಗೆ ಒಂದೇ ತಿಂಗಳಲ್ಲಿ ಮೂರು ಬಾರಿ ವಿವಿಧ ವಿಷಯಗಳ ಬಗ್ಗೆ ವೆಬಿನಾರ್ ನಡೆಸಿ ಸೈ ಅನಿಸಿಕೊಂಡಿದ್ದಾರೆ.
ಎನ್ಐಟಿಕೆಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಅರುಣ್ ಮೋಹನ್ ಇಸ್ಲೂರು ಅವರು, ಇಂಡೋನೇಷ್ಯಾದ ಅತ್ಯಂತ ದೊಡ್ಡ ಖಾಸಗಿ ವಿಶ್ವವಿದ್ಯಾನಿಲಯ ಯುನಿವರ್ಸಿಟಾಸ್ ಮುಹಮ್ಮದಿಯಾ ಪೊಂಟಿಯಾನಕ್ನ ವಿದ್ಯಾರ್ಥಿಗಳೊಂದಿಗೆ ಜೂನ್ ತಿಂಗಳಲ್ಲಿ ಮೂರು ಬಾರಿ ವೆಬಿನಾರ್ ನಡೆಸಿದ್ದಾರೆ. ಪ್ರತೀ ಬಾರಿಯೂ 260, 200, 300 ವಿದ್ಯಾರ್ಥಿಗಳು ಈ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಪ್ರೊ. ಅರುಣ್ ಮೋಹನ್ ಇಸ್ಲೂರ್ ಅವರು 2017 ಮತ್ತು 2018ರಲ್ಲಿ ಎರಡು ಬಾರಿ ಇಂಡೋನೇಷ್ಯಾದ ಯುನಿವರ್ಸಿಟಾಸ್ ಮುಹಮ್ಮದಿಯಾ ಪೊಂಟಿಯಾನಕ್ಗೆ ಭೇಟಿ ನೀಡಿ ಪ್ರಬಂಧ ಮಂಡಿಸಿದ್ದರು. ಇದೀಗ ಅಲ್ಲಿನ ಉನ್ನತ ಅಧಿಕಾರಿಗಳ ಮನವಿಯ ಮೇರೆಗೆ ಈ ಸಂವಾದ ನಡೆಸಿದ್ದಾರೆ.
ಈ ಸಂವಾದದಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ 'ಬಯೋಕೆಮಿಸ್ಟ್ರಿ ಆಫ್ ಕೊರೊನಾ ವೈರಸ್' ವಿಷಯದ ಕುರಿತು ಸಂವಾದ ನಡೆಸಿದರೆ, ಕೆಮಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 'ಇಂಪ್ಲಿಮೆಂಟೇಷನ್ ಆಫ್ ಮೆಂಬ್ರೇನ್ ಟೆಕ್ನಾಲಜಿ ಇನ್ ದ ಫೀಲ್ಡ್ ಆಫ್ ಹೆಲ್ತ್ ಆ್ಯಂಡ್ ಆಲ್ಟರ್ನೇಟಿವ್ ಎನರ್ಜಿ ಫೋರ್ಸ್' ವಿಷಯದ ಕುರಿತು ಸಂವಾದ ನಡೆಸಿದ್ದಾರೆ. ಒಟ್ಟು ಎಲ್ಲಾ ವಿದ್ಯಾರ್ಥಿಗಳಿಗೆ ಸೇರಿ 'ಸಂಶೋಧನಾ ಬರಹ ಬರೆಯುವ ವಿಧಾನ'ದ ಬಗ್ಗೆ ಒಂದು ಸಂವಾದ ನಡೆಸಿಕೊಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರೊ. ಅರುಣ್ ಮೋಹನ್ ಇಸ್ಲೂರು ಅವರು, ಇಂಡೋನೇಷ್ಯಾದ ವಿದ್ಯಾರ್ಥಿಗಳು ಬಹಳಷ್ಟು ಕುಶಾಗ್ರಮತಿಗಳಾಗಿದ್ದು, ಸಂವಾದದಲ್ಲಿ ಅತ್ಯಮೋಘವಾಗಿ ಸ್ಪಂದಿಸಿದ್ದಾರೆ. ಒಂದು ಗಂಟೆ ನನ್ನ ಮಾತಿನ ಬಳಿಕ 10-15 ನಿಮಿಷಗಳ ಕಾಲ ಪ್ರಶ್ನೋತ್ತರ ನಡೆಯಬಹುದು ಎಂದು ಎನಿಸಿಕೊಂಡಿದ್ದೆ. ಆದರೆ ಅಲ್ಲಿನ ವಿದ್ಯಾರ್ಥಿಗಳಿಂದ ಉತ್ತಮವಾದ ಪ್ರಶ್ನೆಗಳು ಬರುತ್ತಿರುವ ಕಾರಣ ನಾನು ಬಹಳಷ್ಟು ತಯಾರಿ ನಡೆಸಿಯೇ ಸಂವಾದದಲ್ಲಿ ಭಾಗವಹಿಸಬೇಕಿತ್ತು ಎಂದು ಹೇಳಿದರು.
ಪ್ರೊ.ಅರುಣ್ ಮೋಹನ್ ಇಸ್ಲೂರು ಅವರು ಈ ನಡುವೆ ಭಾರತದ ವಿವಿಧ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ವೆಬಿನಾರ್ನಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಜೈವಿಕ ವೈವಿಧ್ಯ ವಿಷಯದ ಕುರಿತು ಸಂವಾದ, ತಮಿಳುನಾಡು ಕಲಾಸಲಿಂಗಂ ಅಕಾಡೆಮಿ ಆಫ್ ರಿಸರ್ಚ್ ಎಜುಕೇಶನ್ ನ ವಿದ್ಯಾರ್ಥಿಗಳೊಂದಿಗೆ ಬಯೋಕೆಮಿಸ್ಟ್ರಿ ಆಫ್ ಕೊರೊನಾ ವೈರಸ್ ಆ್ಯಂಡ್ ಇಟ್ಸ್ ಟಾಕಿಂಗ್ಸ್' ಕುರಿತು ಸಂವಾದ, ರೇವಾ ಯುನಿವರ್ಸಿಟಿಯೊಂದಿಗೆ 'ಮೆಮೊರಿ ಟೆಕ್ನಾಲಜಿ' ಕೊಳ್ಳೇಗಾಲ ಶರ್ಮಾ ಅವರ ವಿನಂತಿ ಮೇರೆಗೆ 'ಅಡುಗೆ ರಸಾಯನ ಶಾಸ್ತ್ರ', ರಾಷ್ಟ್ರೀಯ ಇಂಜಿನಿಯರಿಂಗ್ ಸಂಘದ ಬೆಂಗಳೂರು ಚಾಪ್ಟರ್ ಗೆ ಪರಿಸರ ಮತ್ತು ಮಣ್ಣು ಸವಕಳಿ ಕುರಿತು ಆನ್ ಲೈನ್ ಮೂಲಕ ಸಂವಾದ ನಡೆಸಿದ್ದರು. ದೇಶ-ವಿದೇಶದಲ್ಲಿ ಇನ್ನೂ ನಾಲ್ಕೈದು ಆನ್ಲೈನ್ ಸಂವಾದ ಕಾರ್ಯಕ್ರಮ ನಡೆಸಲು ಬಾಕಿ ಇದೆಯಂತೆ.