ಸುಳ್ಯ (ದಕ್ಷಿಣ ಕನ್ನಡ): ಸುಳ್ಯ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರ ಶೌಚಾಲಯದ ಬಳಿ ಬಂದು ಇಣುಕಿ ನೋಡಿ, ತನ್ನ ಮೊಬೈಲ್ನಲ್ಲಿ ವಿದ್ಯಾರ್ಥಿನಿಯರ ಭಾವಚಿತ್ರ ಹಾಗೂ ವಿಡಿಯೋ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯವು ತೀರ್ಪು ನೀಡಿದೆ.
ಆರೋಪಿ ಮಹಮ್ಮದ್ ಇರ್ಷಾದ್ ಎಂಬಾತನ ವಿರುದ್ಧ 2017 ರಲ್ಲಿ ಭಾರತೀಯ ದಂಡ ಸಂಹಿತೆ ಕಲಂ 354 (c) ಅನ್ವಯ ಪ್ರಕರಣ ದಾಖಲಿಸಿದ ಅಂದಿನ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಚಂದ್ರಶೇಖರ್ ಎಚ್, ಸುಳ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಈ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಸೋಮಶೇಖರ್ ಅವರು ಆರೋಪಿ ಎಸಗಿರುವ ಅಪರಾಧಕ್ಕೆ ಒಂದು ವರ್ಷ ಕಾರಾಗೃಹ ವಾಸ ಮತ್ತು ಹತ್ತು ಸಾವಿರ ರೂಪಾಯಿಗಳ ದಂಡ ವಿಧಿಸಿ ಆದೇಶ ನೀಡಿದ್ದಾರೆ. ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿ ಒಂದು ತಿಂಗಳ ಸಾದಾ ಕಾರಾಗೃಹವಾಸ ಅನುಭವಿಸುವಂತೆ ತೀರ್ಪಿನಲ್ಲಿ ಹೇಳಲಾಗಿದೆ.
ಈ ಪ್ರಕರಣದಲ್ಲಿ ನೊಂದ ಬಾಲಕಿಗೆ ದಂಡದ ಮೊತ್ತವಾದ ಹತ್ತು ಸಾವಿರ ರೂಪಾಯಿಗಳಲ್ಲಿ ಎಂಟು ಸಾವಿರ ರೂಪಾಯಿ ಪರಿಹಾರವಾಗಿ ನೀಡುವಂತೆಯೂ ತೀರ್ಪನಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಅಭಿಯೋಜನಾ ಪರವಾಗಿ ಸುಳ್ಯ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಜನಾರ್ಧನ್ ಬಿ ಸಾಕ್ಷಿಗಳ ವಿಚಾರಣೆ ನಡೆಸಿ ವಾದವನ್ನು ಮಂಡಿಸಿದರು.