ಬೆಳ್ತಂಗಡಿ: ರಾಷ್ಟ್ರಾದ್ಯಂತ ಬಿಜೆಪಿ ಅಭಿವೃದ್ಧಿಯ ಸಂಕಲ್ಪ ಮಾಡಿದೆಯೇ ಹೊರತು ರಾಜಕಾರಣ ನಮ್ಮ ಗುರಿಯಲ್ಲ. ನಾವು ಯಾರನ್ನೂ ಟೀಕೆ ಮಾಡಲು ಬಯಸುವುದಿಲ್ಲ. ಇದು ಕೇವಲ ಕುಟಂಬ ಮಿಲನವಲ್ಲ, ಸಂಕಲ್ಪ ಸಮಾವೇಶ. ಈ ಬಾರಿ ಉಜಿರೆಯಲ್ಲಿ ಪರಿವರ್ತನೆ ಮಾಡಿಯೇ ಸಿದ್ಧ. ಪರಿವರ್ತನೆಯಾಗಿ ಗ್ರಾ.ಪಂ, ಚುಣಾವಣೆಯಲ್ಲಿ 34 ಸ್ಥಾನಕ್ಕೆ 34 ಸ್ಥಾನಗಳನ್ನೂ ಗೆಲ್ಲಿಸಿದರೆ, ಈ ಬಾರಿ ಉಜಿರೆಯನ್ನು ಆದರ್ಶ ಗ್ರಾಮವನ್ನಾಗಿ ರೂಪಿಸಲಿದ್ದೇನೆ. ಜನತೆ ಆಶೀರ್ವಾದ ಮಾಡಿ ಬಿಜೆಪಿ ಕಾರ್ಯಕರ್ತರನ್ನು ಗೆಲ್ಲಿಸಿದಲ್ಲಿ 3 ವರ್ಷದಲ್ಲಿ ಅಭಿವೃದ್ಧಿ ಮೂಲಕ ಉಜಿರೆಯಲ್ಲಿ ಅಭಿವೃದ್ಧಿ ಶಕೆ ಆರಂಭಿಸುವ ಜೊತೆಗೆ ದೇಶದಲ್ಲೇ ಮಾದರಿ ಗ್ರಾಮವನ್ನಾಗಿ ರೂಪಿಸಲಿದ್ದೇವೆ ಎಂದು ಸಂಸದ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಉಜಿರೆ ಮಹಾಶಕ್ತಿಕೇಂದ್ರ ಹಮ್ಮಿಕೊಂಡಿದ್ದ ಉಜಿರೆ ಗ್ರಾಮಪಂಚಾಯತ್ ಮಟ್ಟದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯ ಶಾಸಕ ಹರೀಶ್ ಪೂಂಜ ಅವರು ಮುಖ್ಯಂತ್ರಿಗಳನ್ನು ಕಾಡಿ ಬೇಡಿ ಅನುದಾನ ತರುತ್ತಾರೆ. ಅದೇ ರೀತಿ ಉಜಿರೆಯಲ್ಲಿ ಬಿಜೆಪಿ ಗೆದ್ದಲ್ಲಿ ನಾನು ಪ್ರಧಾನಿಯವರ ಬಳಿ ತೆರಳಿ ಅನುದಾನ ಬಿಡುಗಡೆ ಮಾಡಿಸಲಿದ್ದೇನೆ. ಸಾಮಾನ್ಯ ಕಾರ್ಯಕರ್ತರನ್ನೂ ಮುನ್ನೆಲೆಗೆ ತರುವ ಉದ್ದೇಶದಿಂದ ಕುಟುಂಬ ಮಿಲನ ಹಮ್ಮಿಕೊಂಡಿದ್ದು, ಈ ಬಾರಿ ಬೃಹತ್ ಸಮಾವೇಶವಾಗಿ ರೂಪುಗೊಂಡಿದೆ. ರಾಜ್ಯದಲ್ಲಿ ಪಂಚಾಯತ್ ಚುನಾವಣೆ ದೃಷ್ಟಿಯಿಂದ ಸಾಮಾನ್ಯ ಕಾರ್ಯಕರ್ತರನ್ನೂ ತಲುಪಲು ಕುಟುಂಬ ಸಮ್ಮಿಲನ ಮಾಡಬೇಕು ಎಂದು ಯೋಜನೆ ರೂಪಿಸಲಾಗಿತ್ತು. ಅದೇ ರೀತಿ 27ರಂದು ಯಾತ್ರೆ ಆರಂಭವಾಗಲಿದೆ.
ಶಾಸಕ ಹರೀಶ್ ಪೂಂಜಾ ಅವರು ಇಲ್ಲಿಯೇ ಯಾತ್ರೆಗೆ ದೊಡ್ಡ ಮಟ್ಟದ ಆರಂಭ ನೀಡುವ ಮೂಲಕ ಸಮಾವೇಶದ ರೀತಿ ಕಾರ್ಯಕ್ರಮ ಆಯೋಜಿಸಿ, ಹೊಸ ದಿಕ್ಕನ್ನು ನೀಡಿದ್ದಾರೆ. ಉಜಿರೆಯಲ್ಲಿ ಮನೆಯಿಲ್ಲದವರಿಗೆ ಹಕ್ಕುಪತ್ರ ವಿತರಣೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಅವಕಾಶವಿದೆ. ಈ ಎಲ್ಲಾ ಕಾರ್ಯಗಳನ್ನು ಮಾಡಲಾಗುವುದು. ರಾತ್ರಿ ಹಗಲು ಕೆಲಸ ಮಾಡುತ್ತಾ, ಯುವ ನಾಯಕ ಶಾಸಕ ಹರೀಶ್ ಪೂಂಜಾ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುತ್ತಾರೆ ಅವರಿಗೆ ಸದಾ ಸಹಕಾರ ನೀಡಲಾಗುವುದು ಎಂದರು.
ಕುಡಿವ ನೀರು, ಒಳಚರಂಡಿ ವ್ಯವಸ್ಥೆಗೆ ಆದ್ಯತೆ:
ಶಾಸಕ ಹರೀಶ್ ಪೂಂಜ ಮಾತನಾಡಿ, ಉಜಿರೆ ಗ್ರಾ.ಪಂನ ಸಮಸ್ಯೆಗಳ್ನು ಬಗೆಹರಿಸಲು ಪ್ರಯತ್ನಿಸಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದಲ್ಲಿ ಹೆಚ್ಚಿನ ಅಭಿವೃದ್ಧಿಕಾರ್ಯ ನಡೆಸಲಾಗುವುದು. ಈಗಾಗಲೇ ರಸ್ತೆ ಅಭಿವೃದ್ಧಿ ಮಾಡಲಾಗಿದೆ, ಸೂರ್ಯ ಸಂಪರ್ಕ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಮಾಡಲಾಗಿದೆ. ಪ್ರತಿ ಬೂತ್ ಅಭಿವೃದ್ಧಿಗೆ ಪ್ರಾಮಾಣಿಕ ಕಾರ್ಯ ನಿರ್ವಹಣೆ ಮಾಡಲಾಗಿದೆ. ಮುಂದೆ ಪ್ರತಿ ರಸ್ತೆ ಅಭಿವೃದ್ಧಿ, ಪ್ರತಿ ಮನೆಗೆ ನೀರು ಮೊದಲಾದ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಉಜಿರೆ ವ್ಯಾಪ್ತಿಯ 300ಕ್ಕಿಂತ ಹೆಚ್ಚು ವಸತಿ ರಹಿತರು ಅರ್ಜಿ ಸಲ್ಲಿಸಿದ್ದು, ಎಲ್ಲರಿಗೂ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದಲ್ಲಿ ರಾಜೀವ್‍ಗಾಂಧಿ ವಸತಿ ಯೋಜನೆ ಮೂಲಕ ವಸತಿ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. 13 ಮಂದಿಯನ್ನು ಬೂತ್ ಮಟ್ಟದ ಪ್ರಭಾರಿಗಳನ್ನು ನೇಮಿಸಲಾಗಿದ್ದು, ಸಂಘಟನೆಯ ಕಾರ್ಯ ನಡೆಸಲಿದ್ದಾರೆ. ರಾಜ್ಯಾಧ್ಯಕ್ಷರು ಗ್ರಾಮಮಟ್ಟದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಳಮಟ್ಟದಲ್ಲಿ ಪಕ್ಷ ಅಭಿವೃದ್ಧಿ ಹೊಂದಲು ಕೊಡುಗೆ ನೀಡಿದ್ದಾರೆ. ಅದೇ ರೀತಿ ತಾಲೂಕಿಗೆ 2 ವರ್ಷಗಳ ಅವಧಿಯಲ್ಲಿ 600 ಕೋಟಿ ರೂ. ಬಿಡುಗಡೆಯಾಗುವಲ್ಲಿಯೂ ಸಂಸದರ ಪಾತ್ರ ಮುಖ್ಯವಾದುದು.
ಕಾಂಗ್ರೆಸ್‍ನಲ್ಲಿ ನಕಲಿ ಗಾಂಧಿಗಳ ಹಾವಳಿ:
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೇ 1.5 ಲಕ್ಷ ನಕಲಿ ಎನ್.ಜಿ.ಓ., 2.5 ಲಕ್ಷ ನಕಲಿ ಪಡಿತರ ಕಾರ್ಡ್ ಬಂದ್ ಮಾಡಿದೆ. ಸುಮಾರು 10 ಲಕ್ಷ ನಕಲಿ ಶಿಕ್ಷಕರು ಕೆಲಸ ಕಳೆದುಕೊಂಡರು. ಇದೀಗ ದೇಶದಲ್ಲಿ ನಕಲಿ ಗಾಂಧಿಗಳ ಹಾವಳಿ ಸೃಷ್ಟಿಯಾಗಿದೆ. ಕಾಂಗ್ರೆಸ್‍ನ ಇತಿಹಾಸವೆಂದರೆ ನಕಲಿ ಗಾಂಧಿಗಳು ಸೃಷ್ಟಿಯಾಗಿರುವುದು. ಸ್ವಾತಂತ್ರ ಪೂರ್ವದಲ್ಲಿ ಕಾಂಗ್ರೆಸ್‍ನಲ್ಲಿ ಮಹಾತ್ಮ ಗಾಂಧಿಯ ಇತಿಹಾಸವಿತ್ತು, ಇದೀಗ ನಕಲಿ ಗಾಂಧಿಗಳ ಇತಿಹಾಸವಿದೆ. ದೇಶದಲ್ಲಿ ನಕಲಿ ಜಾತ್ಯಾತೀತತೆ, ಲಂಚ, ಭ್ರಷ್ಟಾಚಾರ ಪಿತೂರಿಗಳ ಇತಿಹಾಸ ಹಗರಣದ ಇತಿಹಾಸ, ಎಲ್ಲದರ ಹಿಂದೆ ಈ ನಕಲಿಗಳ ಹಾವಳಿ ಇದೆ ಎಂದು ಟೀಕಿಸಿದರು.
ಒಂದು ಮತದಾನದಿಂದ ಸಮಾಜದ ಬದಲಾವಣೆ:
ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಒಂದು ಮತ ಸಮಾಜದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ನಮ್ಮ ಒಂದು ಮತ ಶಾಸಕರನ್ನು ಬದಲಾವಣೆ ಮಾಡುವ ಜೊತೆಗೆ ಅಭಿವೃದ್ಧಿ ಪರ್ವ ಆರಂಭಗೊಳ್ಳಲು ಮುನ್ನುಡಿ ಬರೆದಿದೆ. ಬೂತ್ ಮಟ್ಟದಲ್ಲಿಯೇ ಅತಿ ಹೆಚ್ಚು ಅನುದಾನ ಬಿಡುಗಡೆಗೊಳ್ಳುವ ಮೂಲಕ ಅಭಿವೃದ್ಧಿ ನಡೆಯುತ್ತಿದೆ. ಪ್ರಜಾಪ್ರಭುತ್ವದ ಶಕ್ತಿ ನಮ್ಮ ಮತ ಚಲಾವಣೆಯಲ್ಲಿದೆ ಬೆಳ್ತಂಗಡಿಯಲ್ಲಿ ಬದಲಾವಣೆ ತರಬಲ್ಲ ಗ್ರಾ.ಪಂ. ಉಜಿರೆಯಾಗಿದೆ. ಉಜಿರೆಯಲ್ಲಿ ಬದಲಾವಣೆ ಉಂಟಾಗುವ ಮೂಲಕ ಮಾದರಿ ಗ್ರಾಮ ನಿರ್ಮಾಣ ನಡೆಯಬೇಕು ಎಂದರು.