ಬೆಳ್ತಂಗಡಿ : ಅಭಿವೃದ್ಧಿಯತ್ತ ಸಾಗುತ್ತಿರುವ ದೇಶಕ್ಕೆ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಇದಕ್ಕಾಗಿ ಸರ್ಕಾರ ಪ್ರತಿ ಗ್ರಾಮಗಳಲ್ಲಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಬೆರಳೆಣಿಕೆಯಷ್ಟು ಗ್ರಾಪಂಗಳು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿವೆ. ಆ ಸಾಲಿಗೆ ಉಜಿರೆ ಗ್ರಾಪಂ ಸೇರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಉಜಿರೆ, ಶಿಕ್ಷಣ ಕ್ಷೇತ್ರದಲ್ಲಿ ಇಡೀ ವಿಶ್ವಕ್ಕೆ ಚಿರಪರಿಚಿತವಾಗಿದೆ. ಇದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಮೀಪದಲ್ಲಿದೆ. ಹೆಚ್ಚಿನ ಪ್ರವಾಸಿಗರ ಭೇಟಿ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಿವಿಧ ವ್ಯಾಪಾರೋದ್ಯಮಗಳು, ಹೆಚ್ಚಿನ ಜನಸಂಖ್ಯೆ ಇರುವುದರಿಂದ ಈ ಗ್ರಾಮ ಪಂಚಾಯತ್‌ನಲ್ಲಿ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸವಾಲಾಗಿತ್ತು.

ಆಗ ತ್ಯಾಜ್ಯದ ಸಮರ್ಪಕ ನಿರ್ವಹಣೆಗಾಗಿ 2017ರಲ್ಲಿ ಇಚ್ಚಿಲ ಎಂಬಲ್ಲಿ ಘನ ತ್ಯಾಜ್ಯ ಘಟಕವನ್ನು ಸ್ಥಾಪಿಸಿ ತ್ಯಾಜ್ಯ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿತ್ತು.
ಆದರೆ, 2019ರಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಛ, ನಮ್ಮ ಗ್ರಾಮ ಸ್ವಚ್ಛ ಗ್ರಾಮವಾಗಿ ರೂಪುಗೊಂಡು ಇಡೀ ರಾಜ್ಯಕ್ಕೆ ಮಾದರಿಯಾಗಿ ಮೂಡಿ ಬರಬೇಕೆಂಬ ಉದ್ದೇಶದಿಂದ ಅನೇಕ ಯೋಜನೆಗಳನ್ನು ಹಾಕಿಕೊಂಡರು.

ಇದಕ್ಕಾಗಿ ಗ್ರಾಪಂ ಆಡಳಿತ ವರ್ಗ, ಗ್ರಾಮಸ್ಥರು, ಸಂಘ-ಸಂಸ್ಥೆಗಳನ್ನು ಸಂಪರ್ಕಿಸಿ ಈ ಬಗ್ಗೆ ಕಾರ್ಯಾಗಾರವನ್ನು ಮಾಡಿ ಜನರಿಗೆ ತ್ಯಾಜ್ಯ ಕಸವಲ್ಲ ಅದೂ ಕೂಡ ಸಂಪನ್ಮೂಲ ಎಂಬ ಬಗ್ಗೆ ಮಾಹಿತಿ ನೀಡಿದರು.
ಉಜಿರೆ ಘನ ತ್ಯಾಜ್ಯ ಘಟಕವನ್ನು ಅಭಿವೃದ್ಧಿಪಡಿಸಿ ವ್ಯವಸ್ಥಿತ ರೀತಿಯಲ್ಲಿ ವಾಹನ ಹಾಗೂ ಸಿಬ್ಬಂದಿಯನ್ನು ನೇಮಕ ಮಾಡಿ ತ್ಯಾಜ್ಯವನ್ನು ಸಂಗ್ರಹಿಲು ಪ್ರಾರಂಭಿಸಿದರು.
ಬಳಿಕ ಸಂಗ್ರಹವಾಗುವ ತ್ಯಾಜ್ಯವನ್ನು ಘಟಕಕ್ಕೆ ತಂದು ಹಸಿ ಮತ್ತು ಒಣ ಕಸಗಳಾಗಿ ಬೇರೆ ಬೇರೆಯಾಗಿ ವಿಂಗಡಿಸುವಂತಹ ಕೆಲಸ ಮಾಡುತ್ತಿದ್ದಾರೆ. ಸಂಗ್ರಹವಾದಂತಹ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಂಗಡಿಸಿ ಜೋಡಿಸಲಾಗಿದೆ.
ಇದರ ಜೊತೆಗೆ ಹಸಿ ಮತ್ತು ಒಣ ಕಸದಿಂದ 'ಉಜಿರೆ ಜನ್ಯ' ಎಂಬ ಗೊಬ್ಬರವನ್ನೂ ತಯಾರಿಸಲಾಗುತ್ತಿದೆ. ಅದಲ್ಲದೆ ಪ್ಲಾಸ್ಟಿಕ್ಗಳನ್ನು ವಿಂಗಡಿಸಿ ಅದನ್ನೂ ಯಂತ್ರಗಳ ಮೂಲಕ ಕರಗಿಸಿ ನೆಲಕ್ಕೆ ಹಾಸುವಂತಹ ಟೈಲ್ಸ್ ಸಿದ್ಧಪಡಿಸುವಂತಹ ಕೆಲಸಗಳೂ ನಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೇವಲ ಎರಡು ಪಂಚಾಯತ್‌ಗಳಲ್ಲಿ ಮಾತ್ರ ಇಂತಹ ಯಂತ್ರಗಳಿವೆ. ತಾಲೂಕಿನ ಎಲ್ಲಾ ಪಂಚಾಯತ್‌ನವರೂ ನಮ್ಮ ಘಟಕಕ್ಕೆ ಪ್ಲಾಸ್ಟಿಕ್ ನೀಡಬಹುದು.
ಇದಕ್ಕೆಲ್ಲ ಬೆನ್ನೆಲುಬಾಗಿ ಶಾಸಕ ಹರೀಶ್ ಪೂಂಜರವರಿದ್ದು, ಇವರ ಜೊತೆಗೆ ಪಂಚಾಯತ್‌ನ ಆಡಳಿತ ವರ್ಗದ ಸಿಬ್ಬಂದಿ ಸಹಕಾರದಿಂದ ಉಜಿರೆ ಗ್ರಾಮ ಪಂಚಾಯತ್ ರಾಜ್ಯಕ್ಕೆ ಮಾದರಿಯಂತಾಗುವ ತ್ಯಾಜ್ಯ ಘಟಕ ಸ್ಥಾಪನೆಯಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ದೃಢ ಸಂಕಲ್ಪದೊಂದಿಗೆ ಭವಿಷ್ಯ ಕಂಡುಕೊಳ್ಳಬೇಕು-''ಸಂಕಲ್ಪ''ರಂತೆ ಜೀವ ಕಳೆದುಕೊಳ್ಳಬಾರದು: ಹೆಚ್ಡಿಕೆ