ಬೆಳ್ತಂಗಡಿ : ಉಜಿರೆ ರಥಬೀದಿಯಿಂದ ಅಪಹರಣಕ್ಕೊಳಗಾದ ಎಂಟರ ಹರೆಯದ ಬಾಲಕ ಅನುಭವ್ ಮನೆಗೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಇಂದು ಭೇಟಿ ನೀಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದಾರೆ.
ಬಾಲಕನನ್ನು ಅಪಹರಣ ಮಾಡಿದವರು ಡಿ.17 ರಂದು ರಾತ್ರಿ 17 ಕೋ.ರೂ. ಗೆ ಬೇಡಿಕೆ ಇಟ್ಟಿದ್ದರು. ಡಿ. 18ರಂದು ಬೆಳಗ್ಗೆ ತಮ್ಮ ವರಸೆ ಬದಲಾಯಿಸಿ 10 ಕೋಟಿ ರೂಪಾಯಿ ಬೇಡಿಕೆ ಸಲ್ಲಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಹಣಕಾಸಿನ ವಿಚಾರಕ್ಕೆ ಬಾಲಕನನ್ನು ಅಪಹರಿಸಿ, ಒತ್ತೆ ಇಟ್ಟು ಹಣಕ್ಕೆ ಬೇಡಿಕೆ ನೀಡಿರುವ ಕುರಿತು ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಬಾಲಕನನ್ನು ಅಪಹರಣ ಮಾಡಿದವರು ಸಾಮಾಜಿಕ ಜಾಲತಾಣದ ಮೂಲಕ ಬಾಲಕನ ತಂದೆಯೊಂದಿಗೆ ಹಣದ ಬೇಡಿಕೆ ಇಡುತ್ತಿರುವುದಾಗಿ ತಿಳಿದು ಬಂದಿದೆ.
ಓದಿ...ಉಜಿರೆ ಬಾಲಕನ ಅಪಹರಣ ಕೇಸ್; 17 ಕೋಟಿಗೆ ಬೇಡಿಕೆ ಇಟ್ರಾ ಕಿಡ್ನಾಪರ್ಸ್?
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಉಜಿರೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಪ್ರಕರಣ ಸುಖಾಂತ್ಯಕ್ಕಾಗಿ ಪೊಲೀಸರು ಶ್ರಮಿಸುತ್ತಿದ್ದಾರೆ. ದ.ಕ. ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಬಾಲಕ ಮನೆಗೆ ಭೇಟಿ ಮಾಡಿ ಮನೆಯವರೊಂದಿಗೆ ಚರ್ಚಿಸಿ, ತನಿಖೆಗೆ ಚುರುಕು ಮುಟ್ಟಿಸಿದ್ದಾರೆ.