ಮಂಗಳೂರು: ಮಂಗಳೂರಿನ ಕೋಸ್ಟ್ ಗಾರ್ಡ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದ್ದ 2 ಹೋವರ್ ಕ್ರಾಫ್ಟ್‌ಗಳನ್ನು ಭಾರತ-ಪಾಕಿಸ್ತಾನದ ಗಡಿಭಾಗದ ಕಾವಲಿಗಾಗಿ ಗುಜರಾತ್ಗೆ ಕಳುಹಿಸಲಾಗಿದೆ ಎಂದು ಕೋಸ್ಟ್‌ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಮನೋಜ್ ವಿ ಬಾಡ್ಕರ್ ತಿಳಿಸಿದ್ದಾರೆ.
ಪಶ್ಚಿಮ ವಲಯ ಕಮಾಂಡರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ಮಂಗಳೂರಿಗಿಂತಲೂ ಗುಜರಾತ್ಗೆ ಅಗತ್ಯವಿದ್ದ ಎರಡು ಹೋವರ್ ಕ್ರಾಫ್ಟ್ ನೌಕೆಗಳನ್ನು ಮಂಗಳೂರಿನ ತಣ್ಣೀರುಬಾವಿಯಿಂದ ಗುಜರಾತಿಗೆ ಕಳುಹಿಸಲಾಗಿದೆ. ಈಗ ನಮ್ಮಲ್ಲಿ 18 ಹೋವರ್ ಕ್ರಾಫ್ಟ್‌ಗಳಿದ್ದು, ಮುಂದೆ ಇದರ ಸಂಖ್ಯೆ ಹೆಚ್ಚಾದಾಗ ಮತ್ತೆ ಮಂಗಳೂರಿಗೆ ಬರುವ ಸಾಧ್ಯತೆಗಳು ಇವೆ ಎಂದು ತಿಳಿಸಿದರು.
ಈಗ ಮಂಗಳೂರಿನ ಹಳೆ ವಿಮಾನ ನಿಲ್ದಾಣದಲ್ಲಿ ಕೋಸ್ಟ್‌ಗಾರ್ಡ್ ವಿಮಾನಗಳು ನಿಲ್ಲುತ್ತಿದೆ. ಅಲ್ಲಿ ವಿಮಾನ ನಿಲುಗಡೆ ಮಾಡುವ ಹ್ಯಾಂಗರ್‌ಗಳ ನಿರ್ಮಾಣ ನಡೆಯುತ್ತಿದ್ದು, ಅದು ಪೂರ್ಣವಾದಾಗ 4 ಡಾರ್ನಿಯರ್ ವಿಮಾನಗಳಿಗೆ ನಿಲ್ಲಲು ಅವಕಾಶ ಇರಲಿದೆ. ಆಗ ಮಂಗಳೂರು ಕೋಸ್ಟ್‌ಗಾರ್ಡ್‌ನ ಪ್ರಮುಖ ವಾಯುನೆಲೆಯಾಗಿ ಮಂಗಳೂರು ಹೊರಹೊಮ್ಮಲಿದೆ ಎಂದರು.
ಹಿಂದೆ ಭಾರತೀಯ ಕೋಸ್ಟ್‌ಗಾರ್ಡ್‌ಗೆ ಏಕ ಎಂಜಿನ್‌ನ ಚೇತಕ್ ಹೆಲಿಕಾಪ್ಟರ್ ನೀಡಲಾಗುತ್ತಿತ್ತು. ಆದರೆ ಈಗ ಹೆಚ್‌ಎಎಲ್ ನಿರ್ಮಾಣದ ಅತ್ಯಾಧುನಿಕ ಎಲ್‌ಸಿಎಚ್ ಮಾರ್ಕ್-3 ಹೆಲಿಕಾಪ್ಟರ್ ನೀಡಲಾಗುತ್ತಿದೆ. ಇದರಿಂದಾಗಿ ಕೋಸ್ಟ್‌ಗಾರ್ಡ್ ಕಡಲಿನಲ್ಲಿ 350 ಕಿ.ಮೀ ದೂರದವರೆಗೂ ತೆರಳಿ ಜೀವ ರಕ್ಷಣೆಯಂತಹ ಕಾರ್ಯಾಚರಣೆ ನಡೆಸಲು ಅನುಕೂಲವಾಗಿದೆ.
ಕೋಸ್ಟ್‌ಗಾರ್ಡ್‌ನಲ್ಲಿ ಹಳೆಯದಾದ ನೌಕೆಗಳಿದ್ದು, ಅವುಗಳನ್ನು ಬದಲಾಯಿಸುವ, ಹೊಸ ನೌಕೆಗಳನ್ನು ಸೇರ್ಪಡೆಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಕೋಸ್ಟ್‌ಗಾರ್ಡ್ ವಿಮಾನಗಳಲ್ಲಿ ಪೈಲಟ್‌ಗಳಾಗಿ ಮಹಿಳೆಯರನ್ನು ನಿಯೋಜಿಸಲಾಗುತ್ತಿದ್ದು, ಮಹಿಳಾ ಸೈಲರ್‌ಗಳ ನೇಮಕಾತಿ ಸ್ವಲ್ಪ ಸಮಯ ಬೇಕಾಗಬಹುದು ಎಂದರು.
ಮಂಗಳೂರಿನಲ್ಲಿ ದೇಶದಲ್ಲೇ ಮೊದಲ ಕೋಸ್ಟ್‌ಗಾರ್ಡ್ ತರಬೇತಿ ಅಕಾಡೆಮಿ ಸ್ಥಾಪನೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಭೂಸ್ವಾಧೀನಗಳು ಸೇರಿದಂತೆ ರಾಜ್ಯ ಸರ್ಕಾರದ ಕಡೆಯಿಂದ ಆಗಬೇಕಾದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ವಿಸ್ತೃತ ಯೋಜನಾ ವರದಿ ತಯಾರಿ ಕೆಲಸ ನಡೆಯಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡರ್: ಕಾರವಾರದ ಮನೋಜ್ ಬಾಡ್ಕರ್ ಪದಗ್ರಹಣ