ಬಂಟ್ವಾಳ(ದ.ಕ): ಆಟೋ ಚಾಲಕ ರಫೀಕ್ ಹಾಗೂ ಆತನ ಪುತ್ರ ಮಧ್ಯಾಹ್ನ ನಮಾಜಿಗೆ ತೆರಳಿದ್ದ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ ವ್ಯಕ್ತಿಯೊಬ್ಬ ರಫೀಕ್ ಪತ್ನಿ ಜೈನಾಬಿ ಕಟ್ಟಿ ಹಾಕಿ, ಮೈಮೇಲಿದ್ದ ಕಿವಿಯೊಲೆ, ಉಂಗುರ, ಹಾಗೂ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂಬ ದೂರೊಂದು ವಿಟ್ಲ ಪೊಲೀಸರಿಗೆ ಬಂದಿತ್ತು.
ತಾಂತ್ರಿಕ ತನಿಖೆಯಲ್ಲಿ ಯಾವೊಂದು ಕುರುಹೂ ಸಿಗದ ಸಂದರ್ಭದಲ್ಲಿ ಪೊಲೀಸರು ತನಿಖೆಯ ಆಯಾಮ ಬದಲಿಸಿದ್ದರು. ಈ ಸಂದರ್ಭ ಮಹಿಳೆಯೇ ಚಿನ್ನವನ್ನು ಬೇರೆಡೆಗೆ ಸಾಗಿಸಿದ್ದು ಬೆಳಕಿಗೆ ಬಂದಿದೆ. ಮನೆಯ ಪಕ್ಕದಲ್ಲಿ ವಾಸವಿರುವ ವ್ಯಕ್ತಿಯ ಕಾಟಕ್ಕೆ ಬಾಡಿಗೆ ಮನೆ ಬದಲಿಸುವ ನಿರ್ಧಾರಕ್ಕೆ ಬಂದಿದ್ದು, ಯಾವ ರೀತಿಯಿಂದ ಹೇಳಿದರೂ, ಒಪ್ಪದಿದ್ದಾಗ ದರೋಡೆಯ ನಾಟಕಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ.
ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜಾ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ, ಸಿಬ್ಬಂದಿಗಳಾದ ಪ್ರಸನ್ನ, ಜಯಕುಮಾರ್, ಪ್ರತ್ತಾಪ, ವಿನಾಯಕ, ಹೇಮರಾಜ್ ಅವರ ತಂಡ ಕಾರ್ಯಾಚರಣೆ ನಡೆಸಿ, ಬಂಗಾರವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಹುಂಡಿ ಒಡೆಯಲು ಬಂದು, ಹುಂಡಿಯನ್ನೆ ಹೊತ್ತೊಯ್ದ ಭೂಪ.. ವಿಡಿಯೋ
ಶ್ವಾನದಳ ಮನೆಯನ್ನು ಸುತ್ತು ಹೊಡೆದಿದ್ದು, ಬೇರೆ ಕಡೆ ಹೋಗಿರಲಿಲ್ಲ ಮತ್ತು ಬೆರಳಚ್ಚು ತಜ್ಞರಿಗೂ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಮನೆ ಮಂದಿಯ ಮೇಲೆ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದರು. ದರೋಡೆ ದಿನ ಬಂಗಾರವನ್ನು ಮನೆಯಲ್ಲಿಯೇ ಅಡಗಿಸಿಟ್ಟಿದ್ದು, ಪೊಲೀಸ್ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಭಯಗೊಂಡ ಮಹಿಳೆ ಅದನ್ನು ಬೇರೆಡೆಗೆ ತೆಗೆದುಕೊಂಡು ಹೋಗಿ ಎಸೆದಿದ್ದಾಳೆ ಎನ್ನಲಾಗಿದೆ. ಪಕ್ಕದ ಮನೆಯಾತನ ತನಿಖೆಯ ಸಂದರ್ಭ ಒಟ್ಟು ಪ್ರಕರಣ ಬೆಳಕಿಗೆ ಬಂದಿದ್ದು, ಭಾಗಶಃ ಬಂಗಾರವೂ ದೊರಕಿದೆ.