ಪುತ್ತೂರು: ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಿನಿ ವಿಧಾನಸೌಧದಲ್ಲಿ ನಡೆದ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೊರೊನಾ ವಾರಿಯರ್ಸ್ಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸುಮಾರು 11 ಇಲಾಖೆಗಳ ಮುಖ್ಯಸ್ಥರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಕೊರೊನಾ ವಾರಿಯರ್ಸ್ಳಾಗಿ ವೈದ್ಯರ ಪರವಾಗಿ ಡಾ. ದೀಪಕ್ ರೈ, ಆರೋಗ್ಯ ಸಹಾಯಕಿಯರ ಪರವಾಗಿ ಉಷಾ ಲತಾ, ಆಶಾ ಕಾರ್ಯರ್ತೆಯರ ಪರವಾಗಿ ಜ್ಯೋತಿ, ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಸಿಡಿಪಿಒ ಶ್ರೀಲತಾ, ಪೊಲೀಸ್ ಇಲಾಖೆ ಪರವಾಗಿ ತಿಮ್ಮಪ್ಪ ನಾಯ್ಕ್, ಶರೀಫ್ ನದಾಫ್, ಗೃಹರ ರಕ್ಷಕದಳದ ಪರವಾಗಿ ಸುದರ್ಶನ್, ಸಯ್ಯದ್ ಇಬ್ರಾಹಿಂ, ನಗರಸಭೆ ಪರವಾಗಿ ಪೌರಾಯುಕ್ತೆ ರೂಪಾ ಶೆಟ್ಟಿ, ಪರಿಸರ ಎಂಜಿನಿಯರ್ ಪರವಾಗಿ ಗುರುಪ್ರಸಾದ್, ಕಂದಾಯ ಇಲಾಖೆ ಪರವಾಗಿ ರವಿ ಕುಮಾರ್, ಚಂದ್ರ ನಾಯ್ಕ, ಶಿಕ್ಷಣ ಇಲಾಖೆ ಪರವಾಗಿ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಹಾಗೂ ಸುಂದರಗೌಡ ಅವರಿಗೆ ಶಾಸಕ ಸಂಜೀವ ಮಠಂದೂರು ಗೌರವಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ದೇಶಕ್ಕಾಗಿ ಯಾರು ಹೋರಾಟ ಮಾಡಿದ್ದಾರೋ, ಸಮರ್ಪಣಾ ಮನೋಭಾವದಿಂದ ಯಾರು ಜೀವನ ನಡೆಸಿದ್ದಾರೋ ಅವರು ಇಂದು ನಮಗೆ ಪ್ರೇರಣೆಯಾಗಿದ್ದಾರೆ. ಪ್ರಧಾನಿಯವರ ಆಶಯದಂತೆ ಇಂದು ಡಿಜಿಟಲ್ ಮೂಲಕ ಪರಿವರ್ತನೆಯ ಕಾಲಘಟ್ಟದಲ್ಲಿ ನಾವಿದ್ದೇವೆ. ಸ್ವದೇಶಿ ವಸ್ತುಗಳ ಬಳಕೆಯ ಜತೆಗೆ ಎಲ್ಲರ ಕೈಗೆ ಸ್ವಾಭೀಮಾನದ ಬದುಕು ನೀಡುವ ಪ್ರಧಾನಿಯವರ ಉದ್ದೇಶ ಆತ್ಮ ನಿರ್ಭರ ಕಾರ್ಯಕ್ರಮದ ಮೂಲಕ ಈಡೇರಿದೆ ಎಂದರು.
ವೇದಿಕೆಯಲ್ಲಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು ಟಿ., ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಡಿವೈಎಸ್‌ಪಿ ದಿನಕರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಉಪಸ್ಥಿತರಿದ್ದರು.