ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ನಡುವೆ ನಡೆದ ಘರ್ಷಣೆಯಲ್ಲಿ ಗಾಯಗೊಂಡಿದ್ದ 15 ವರ್ಷ ಪ್ರಾಯದ 'ನೇತ್ರಾವತಿ' ಎಂಬ ಹೆಸರಿನ ಹುಲಿ ಇಂದು ಬೆಳಗ್ಗೆ ಅಸುನೀಗಿದೆ. ಜೂನ್ 6 ರಂದು ರೇವಾ ಎಂಬ 6 ವರ್ಷದ ಗಂಡು ಹುಲಿ ಮತ್ತು ನೇತ್ರಾವತಿ ನಡುವೆ ನಡೆದ ಘರ್ಷಣೆಯಲ್ಲಿ ನೇತ್ರಾವತಿ ಗಂಭೀರವಾಗಿ ಗಾಯಗೊಂಡಿತ್ತು. 'ರೇವಾ' ಗಂಡು ಹುಲಿಯು ಬೆದೆಗೆ ಬಂದಿರುವುದರಿಂದ ನೇತ್ರಾವತಿ ಸಂಪರ್ಕಕ್ಕೆ ಬಂದಾಗ ಹೆಣ್ಣು ಹುಲಿ ರೇವಾನ ಮೇಲೆರಗಿತ್ತು. ಈ ಸಂದರ್ಭದಲ್ಲಿ ನಡೆದ ಕಚ್ಚಾಟವನ್ನು ಸ್ಥಳದಲ್ಲಿದ್ದ ಸಿಬ್ಬಂದಿ ಹತೋಟಿಗೆ ತಂದು, ಗೂಡಿನೊಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.
ಪಿಲಿಕುಳದ ವೈದ್ಯಾಧಿಕಾರಿ, ವೈಜ್ಞಾನಿಕ ಅಧಿಕಾರಿಗಳು ಶುಶ್ರೂಷೆ ನಡೆಸಿದ ಪರಿಣಾಮ ನೇತ್ರಾವತಿ ಆರೋಗ್ಯ ಸಹಜ ಸ್ಥಿತಿಗೆ ಮರಳುತ್ತಿದ್ದು, ನೀರು ಮತ್ತು ಆಹಾರ ಸೇವಿಸುತಿತ್ತು. ಆದರೆ ಇಂದು ಬೆಳಗ್ಗೆ ವೈದ್ಯಾಧಿಕಾರಿ ಶುಶ್ರೂಷೆ ನೀಡುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿತು.
ನೇತ್ರಾವತಿ ಮತ್ತು ರೇವಾ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಹುಲಿಗಳಾಗಿವೆ. ದೇಹದಲ್ಲಿ ಮೇಲ್ನೋಟಕ್ಕೆ ಗಾಯಗಳಿದ್ದು, ಮರಣವು ಹೋರಾಟದ ತೀವ್ರತೆಯಿಂದ ಹೃದಯಾಘಾತದಿಂದ ಸಂಭವಿಸರಬಹುದು ಎಂದು ಹೇಳಲಾಗಿದೆ. ಆಂತರಿಕ ಗಾಯ ಮತ್ತು ಇತರೆ ಕಾರಣಗಳನ್ನು ಮರಣೋತ್ತರ ಪರೀಕ್ಷೆಯಿಂದ ತಿಳಿಯಲಾಗುವುದು. ರೇವಾನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಪಿಲಿಕುಳದಲ್ಲಿ ಈಗ 8 ಹುಲಿಗಳು ಇವೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ಮಂಗಳೂರು ನಿರ್ದೇಶಕ ಹೆಚ್. ಜೆ. ಭಂಡಾರಿ ಮಾಹಿತಿ ನೀಡಿದ್ದಾರೆ.
ಆರೇಳು ತಿಂಗಳ ಹಿಂದೆಯೂ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ಮಧ್ಯೆ ನಡೆದ ಕಾಳಗದಲ್ಲಿ ಎರಡು ವರ್ಷದ ಹುಲಿ ಮರಿ ಸಾವನ್ನಪ್ಪಿತ್ತು. ಎರಡು ಹುಲಿಗಳ ಮಧ್ಯೆ ನಡೆದ ಕಾದಾಟದಲ್ಲಿ ಎರಡು ವರ್ಷದ ಹುಲಿ ಮರಿ ತೀವ್ರವಾಗಿ ಗಾಯಗೊಂಡಿತ್ತು. ಗಾಯಗೊಂಡಿದ್ದ ಹುಲಿ ಮರಿಗೆ ಜೈವಿಕ ಉದ್ಯಾನವನದ ವೈದ್ಯಾಧಿಕಾರಿಗಳಾದ ಡಾ. ವಿಷ್ಣು ದತ್, ಡಾ. ಮಧುಸೂದನ ಹಾಗೂ ಡಾ. ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದರು. ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಹುಲಿ ಸಹಜ ಸ್ಥಿತಿಗೆ ಮರಳಿತ್ತು. ಆದರೆ ಕೆಲವು ದಿನಗಳ ನಂತರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿ, ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಕೊನೆಯುಸಿರೆಳೆದಿತ್ತು.
ಮೃತ ಹುಲಿ ಮರಿಯ ಮರಣೋತ್ತರ ಪರೀಕ್ಷೆ ನಡೆಸಿದ್ದ ಡಾ. ವಿಷ್ಣು ದತ್ ಅವರು, ಹುಲಿ ಕಿಡ್ನಿ ಹಾಗೂ ಅಂಗಾಂಗಗಳ ವೈಫಲ್ಯದಿಂದ ಸಾವನ್ನಪ್ಪಿತ್ತು ಎಂದು ಹೇಳಿದ್ದರು. ಮೃತ ಹುಲಿ ಮರಿಯ ಅಂಗಾಂಗಗಳ ಮಾದರಿಯನ್ನು ಉತ್ತರ ಪ್ರದೇಶದ ಐ.ವಿ.ಆರ್.ಐ, ಬರೇಲಿ ಮತ್ತು ಬೆಂಗಳೂರಿನ ಐ.ಎ.ಹೆಚ್. ಅಂಡ್ವಿ, ಬಿ ಪ್ರಯೋಲಾಯಕ್ಕೆ ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿತ್ತು. ನವೆಂಬರ್ ತಿಂಗಳಲ್ಲಿ ಸಾವನ್ನಪ್ಪಿದ್ದ ಹುಲಿ ಮರಿ ಕೂಡ ಪಿಲಿಕುಳ ಜೈವಿಕ ಉದ್ಯಾನವನದಲ್ಲೇ ಜನಿಸಿತ್ತು.
ಇದನ್ನೂ ಓದಿ: 10 ವರ್ಷಗಳಲ್ಲಿ 270 ಹುಲಿ ಸಾವು: 'ಹುಲಿ ರಾಜ್ಯ' ಪಟ್ಟ ಕಳೆದುಕೊಳ್ಳುತ್ತಾ ಮಧ್ಯಪ್ರದೇಶ?