ನೆಲ್ಯಾಡಿ(ಮಂಗಳೂರು): ನಲವತ್ತು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನೆಲ್ಯಾಡಿಯಲ್ಲಿ ಬೆಳಕಿಗೆ ಬಂದಿದೆ.
ನೆಲ್ಯಾಡಿ ಗ್ರಾಮದ ಪಡುಬೆಟ್ಟು ತೊಟ್ಟಿಲಗುಂಡಿ ನಿವಾಸಿ ಸಿಲ್ವೆಸ್ಟರ್ ಡಿಸೋಜ(51) ಕೆಲ ದಿನಗಳ ಹಿಂದೆ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು, ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆಘಾತಕಾರಿ ಸಂಗತಿ ಅಂದರೆ ಕಳೆದ 40 ದಿನಗಳಲ್ಲಿ ಇದೇ ಕುಟುಂಬದ ಅಕ್ಕ, ಇಬ್ಬರು ತಮ್ಮಂದಿರು ನಿಧನರಾಗಿದ್ದಾರೆ.
ಮೃತ ಸಿಲ್ವೆಸ್ಟರ್ ಸಹೋದರಿ ಬೆಳ್ತಂಗಡಿ ಸವಣಾಲು ನಿವಾಸಿಯಾಗಿದ್ದ ತೆರೆಸಾ ಡಿಸೋಜ(65) ಜ.29ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಇದಾದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರ ಸೈಮನ್ ಡಿಸೋಜ(55) ರವರು ಫೆ.26ರಂದು ಮನೆಯಲ್ಲಿಯೇ ನಿಧನರಾಗಿದ್ದರು. ಇದೀಗ ಸಿಲ್ವೆಸ್ಟರ್‌ರವರು ಸಾವು ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.
ನೇತ್ರದಾನ : ಕುಟುಂಬ ಸದಸ್ಯರು ನೋವಿನಲ್ಲೂ ಮಾನವೀಯತೆ ಮೆರೆದಿದ್ದು, ಮೃತ ಸಿಲ್ವೆಸ್ಟರ್ ಅವರ ಎರಡು ಕಣ್ಣುಗಳನ್ನು ದಾನ ಮಾಡಲು ಮುಂದಾಗಿದೆ. ಮತ್ತಿಬ್ಬರ ಬಾಳಿಗೆ ಬೆಳಕಾಗುವ ಉದ್ದೇಶದಿಂದ ತಂದೆಯ ಎರಡು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ಸಿಲ್ವೆಸ್ಟರ್‌ರವರ ಪುತ್ರಿ ರೋಹಿತಾ ತಿಳಿಸಿದ್ದಾರೆ.