ಮಂಗಳೂರು: ಮನುಕುಲದ ಶ್ವಾಸಕೋಶಗಳಿರುವುದೇ ದಟ್ಟಾರಣ್ಯದಲ್ಲಿ. ಹಾಗಾಗಿ ಕಾಡನ್ನು ಉಳಿಸಿ ಬೆಳೆಸುವುದರ ಜೊತೆಗೆ ಗಿಡಮರಗಳನ್ನು ಬೆಳೆಸಲು ಉತ್ತೇಜನ ನೀಡಬೇಕು ಎನ್ನುವ ದೃಷ್ಟಿಯಿಂದ ಅರಣ್ಯ ಇಲಾಖೆ ಕೆಲಸಗಳನ್ನು ಮಾಡುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ದ.ಕ.ಜಿಲ್ಲಾಡಳಿತ, ದ.ಕ.ಜಿಪಂ, ಅರಣ್ಯ ಇಲಾಖೆ ಮಂಗಳೂರು ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ನಡೆದ ವೃಕ್ಷೋತ್ಸವ ಕಾರ್ಯಕ್ರಮದಲ್ಲಿ ಮಾಡನಾಡಿದ ಅವರು, ಕಾಡಿನ ರಕ್ಷಣೆ ಮಾಡುವವರ ಮಧ್ಯೆ ಕಾಡುಗಳ್ಳರನ್ನು ನಿಭಾಯಿಸಿ ಕಾಡನ್ನು ಉಳಿಸುವ ಪ್ರಯತ್ನವೂ ಆಗಬೇಕಿದೆ ಎಂದು ಹೇಳಿದರು.
ಕರ್ನಾಟಕ ಇಡೀ ಭಾರತದಲ್ಲೇ ಅರಣ್ಯ ಸಂರಕ್ಷಣೆಯಲ್ಲಿ 5-6ನೇ ಸ್ಥಾನದಲ್ಲಿದೆ. ಇಡೀ ಭಾರತದ ಒಟ್ಟು ವಿಸ್ತೀರ್ಣದ 22.9 ಶೇ. ಭಾಗ ಅರಣ್ಯವಿದೆ. ದಟ್ಟಾರಣ್ಯ ಪ್ರದೇಶಗಳಲ್ಲಿ ವಾಸಿಸುವ ಹುಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರು.
ಅರಣ್ಯ ಇಲಾಖೆಯ ಸಿಬ್ಬಂದಿಗೆ ಪರಿಷ್ಕೃತ ವೇತನ ನೀಡಬೇಕು, ಭಡ್ತಿ ನೀಡಬೇಕು. ಇದೆಲ್ಲದರ ಜೊತೆಗೆ ಅರಣ್ಯ ಇಲಾಖೆ ಮಾಡುವ ಎಲ್ಲಾ ಕೆಲಸಗಳಿಗೆ ಸರ್ಕಾರ ತನ್ನ ಇತಿಮಿತಿಯೊಳಗೆ ಸಹಕಾರ ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಅರಣ್ಯಗಳನ್ನು ಉಳಿಸಲು ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.