ಸುಬ್ರಹ್ಮಣ್ಯ: ದೇವಸ್ಥಾನದ ಮುಖ್ಯ ರಸ್ತೆಯಲ್ಲಿನ ಪೆಟ್ರೋಲ್ ಬಂಕ್ ಸಮೀಪ ಮೊಸಳೆ ಮರಿ ಪತ್ತೆಯಾಗಿದೆ.
ಮೊಸಳೆ ಮರಿ ಪತ್ತೆಯಾದ ಅನತಿ ದೂರದಲ್ಲೇ ಕುಮಾರಧಾರಾ ನದಿ ಹರಿಯುತ್ತಿದೆ. ಈ ನದಿಯಿಂದಲೇ ಮೊಸಳೆ ಮರಿ ಬಂದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಮಳೆಗಾಲದ ಸಂದರ್ಭದಲ್ಲಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದಾಗಿ ನದಿಯಲ್ಲಿರುವ ಮೊಸಳೆಗಳು ದಡ ಸೇರುತ್ತಿವೆ. ಇತ್ತೀಚೆಗೆ ಕಡಬ ತಾಲೂಕಿನ ಇಚ್ಲಂಪ್ಪಾಡಿಯಲ್ಲೂ ಮೊಸಳೆ ಕಾಣಿಸಿತ್ತು.
ಮಳೆಯ ಕಾರಣ ಸುಬ್ರಹ್ಮಣ್ಯದಲ್ಲಿ ಇನ್ನೂ ಹಲವು ಮೊಸಳೆಗಳು ನದಿ ದಡ ಸೇರಿರುವ ಸಾಧ್ಯತೆಯ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರು ಕುಮಾರಧಾರ ನದಿಯಲ್ಲಿ ಸ್ನಾನ ಮಾಡುವುದರಿಂದ ಆತಂಕ ಮನೆ ಮಾಡಿದೆ.
ಮೊಸಳೆ ಮರಿ ಗಮನಕ್ಕೆ ಬಂದ ತಕ್ಷಣವೇ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಬಿ.ಎನ್. ಈ ವಿಚಾರವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಆದರೆ ಸಿಬ್ಬಂದಿಗಳು ಬರುವ ಸಂದರ್ಭದಲ್ಲಿ ಅದು ಕಾಣೆಯಾಗಿತ್ತು.