ಮಂಗಳೂರು: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಪಿಲಿಕುಳದ ಜೈವಿಕ ಉದ್ಯಾನವನಕ್ಕೆ ಮೂರು ಬಾರಸಿಂಗ (ಸ್ವಾಂಪ್ ಜಿಂಕೆ), ಎರಡು ಬಿಳಿ ರಿಯಾ, ಎರಡು ಕಂದು ರಿಯಾ ಬಂದಿವೆ.
ಕೇರಳದ ತಿರುವನಂತಪುರದ ಮೃಗಾಲಯದಿಂದ ಕೊಡುಕೊಳ್ಳುವಿಕೆಯ ಮೂಲಕ ಇವುಗಳನ್ನು ತರಲಾಗಿದೆ. ಮಂಗಳೂರಿನ ಪಿಲಿಕುಳದಿಂದ ತಿರುವನಂತಪುರದ ಮೃಗಾಲಯಕ್ಕೆ ಕಾಳಿಂಗ ಸರ್ಪ ಮತ್ತು ವಿಟೇಕರ್ಸ್ ಹಾವುಗಳನ್ನು ನೀಡಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.
ಪಿಲಿಕುಳ ಜೈವಿಕ ಉದ್ಯಾನವನಕ್ಕೆ ತರಲಾಗಿರುವ ರಿಯಾ ಹಕ್ಕಿ ಉಷ್ಟ್ರಪಕ್ಷಿ ಜಾತಿಗೆ ಸೇರಿದ ಹಕ್ಕಿಯಾಗಿದೆ. ದಕ್ಷಿಣ ಅಮೆರಿಕ, ಬ್ರೆಜಿಲ್, ಅರ್ಜೆಂಟೈನಾ ಮೊದಲಾದ ದೇಶಗಳಲ್ಲಿ ಕಂಡುಬರುವ ಇದು ಹಾರಾಡದ ಅತಿದೊಡ್ಡ ಪಕ್ಷಿಯಾಗಿದೆ. ಇವುಗಳು ಹುಳುಹುಪ್ಪಟೆ, ದವಸ - ಧಾನ್ಯ ಮೊದಲಾದವುಗಳನ್ನು ಆಹಾರವಾಗಿ ಸೇವಿಸುತ್ತವೆ. ಹೆಣ್ಣು ರಿಯಾ ಮೊಟ್ಟೆ ಇಟ್ಟರೆ ಗಂಡು ರಿಯಾ ಅದಕ್ಕೆ ಕಾವು ಕೊಡುತ್ತದೆ.
ಇನ್ನು ಬಾರಸಿಂಗ ಎಂದು ಕರೆಯಲ್ಪಡುವ ಸ್ವಾಂಪ್ ಜಿಂಕೆ ಉತ್ತರ ಭಾರತ ಮತ್ತು ಹಿಮಾಲಯ ಸುತ್ತ ಕಂಡುಬರುವ ಪ್ರಾಣಿ. ಉತ್ತರ ಭಾರತ ಮತ್ತು ನೇಪಾಳದ ಕೆಲವು ಪ್ರದೇಶ ಹೊರತುಪಡಿಸಿದರೆ ಇವು ವಿರಳವಾಗಿದ್ದು ಅಳಿವಿನಂಚಿನಲ್ಲಿರುವ ಪ್ರಭೇದವಾಗಿ ಗುರುತಿಸಲಾಗಿದೆ.