ಮಂಗಳೂರು (ದಕ್ಷಿಣ ಕನ್ನಡ): ಕೊರೊನಾದಂತಹ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಕೇಂದ್ರ ಮಾರುಕಟ್ಟೆಯನ್ನು ಬೈಕಂಪಾಡಿ ಯಾರ್ಡ್ಗೆ ಸ್ಥಳಾಂತರ ಮಾಡಿದ್ದು ತಪ್ಪು ನಿರ್ಧಾರವಾಗಿದೆ. ತಕ್ಷಣ ಕೇಂದ್ರ ಮಾರುಕಟ್ಟೆಯಲ್ಲಿಯೇ ವ್ಯಾಪಾರ ಮಾಡಲು ಅವಕಾಶ ನೀಡಲಿ ಎಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಾರ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಒತ್ತಾಯಿಸಿದ್ದಾರೆ.
ಅಲ್ಲದೇ ವೈಜ್ಞಾನಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕವಷ್ಟೇ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲು ಮುಂದಾಗಲಿ ಎಂದರು. ನಗರದ ಸ್ಟೇಟ್ ಬ್ಯಾಂಕ್ನಲ್ಲಿರುವ ಡಿವೈಎಫ್ಐ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಸೋಂಕಿನ ಭೀತಿಯನ್ನು ನೆಪವಾಗಿಟ್ಟುಕೊಂಡು ಕೇಂದ್ರ ಮಾರುಕಟ್ಟೆಯ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸದೇ ಏಕಾಏಕಿಯಾಗಿ ಬೈಕಂಪಾಡಿ ಎಪಿಎಂಸಿ ಯಾರ್ಡ್ ಗೆ ಕಳುಹಿಸಲಾಗಿತ್ತು.
ಆದರೆ, ಇದು ಏಪ್ರಿಲ್ 2ರಿಂದ 14ರವರೆಗೆ ಸಗಟು ವ್ಯಾಪಾರಿಗಳು ಮಾತ್ರ ತಮ್ಮ ವ್ಯಾಪಾರವನ್ನು ಸ್ಥಳಾಂತರ ಮಾಡಬೇಕೆಂದು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಆದರೆ, ಉಳಿದ ಚಿಲ್ಲರೆ ವ್ಯಾಪಾರಸ್ಥರು ಹಾಗೂ ಅಂಗಡಿಗಳ ಬಗ್ಗೆ ಈವರೆಗೆ ಏನೂ ನಿರ್ಧಾರ ಪ್ರಕಟಿಸಿಲ್ಲ ಎಂದು ಹೇಳಿದರು.
ಈ ಕೇಂದ್ರ ಮಾರುಕಟ್ಟೆಯಲ್ಲಿ 598 ಅಂಗಡಿಗಳಿದ್ದು, ಇದರಲ್ಲಿ ಸಗಟು ವ್ಯಾಪಾರಸ್ಥರು, ಚಿಲ್ಲರೆ ವ್ಯಾಪಾರಸ್ಥರಿದ್ದಾರೆ. ಆದರೆ ಜಿಲ್ಲಾಡಳಿತ ಕೈಗೊಂಡ ನಿರ್ಧಾರ ಒಟ್ಟು ಗೊಂದಲ ಮಯವಾಗಿದೆ. ಈವರೆಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಎಪಿಎಂಸಿ ಯಾರ್ಡ್ನಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ.
ಆದ್ದರಿಂದ ಬೈಕಂಪಾಡಿಯ ಎಪಿಎಂಸಿ ಯಾರ್ಡ್ನಲ್ಲಿ ವ್ಯಾಪಾರ ಮಾಡಲು ಆಗುತ್ತಿಲ್ಲ. ಆದ್ದರಿಂದ ಬೇರೆ ಎಲ್ಲಾದರೂ ವೈಜ್ಞಾನಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ಉಪ ಆಯುಕ್ತರು ಬೇರೆ ಕಡೆ ವ್ಯವಸ್ಥೆ ಮಾಡಲು ತಯಾರಿದ್ದಾರೆ. ಆದರೆ, ಕೆಲವರು ಇದಕ್ಕೆ ಅವಕಾಶ ಕೊಡುತ್ತಿಲ್ಲ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು.