ಸುಳ್ಯ(ದಕ್ಷಿಣ ಕನ್ನಡ): ಮಡಿಕೇರಿಯಿಂದ ಮಂಗಳೂರಿನ ಕಟೀಲಿಗೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದ ವ್ಯಕ್ತಿಯೋರ್ವರು ಸುಳ್ಯದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದಾರೆ. ಈ ಹಿನ್ನೆಲೆ ಕೆಲವು ಯುವಕರು ಇವರನ್ನು ಉಪಚರಿಸಿ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.
ಮಂಗಳೂರಿನ ಕಟೀಲು ನಿವಾಸಿಯಾದ ನಾರಾಯಣ ರೈ ಎಂಬುವರು ಮಡಿಕೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ದೇಶಾದ್ಯಂತ ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಇತ್ತ ಆಹಾರವೂ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ ಐದು ದಿನಗಳ ಹಿಂದೆ ಮಡಿಕೇರಿಯಿಂದ ಕಾಲ್ನಡಿಗೆಯಲ್ಲೇ ಮಂಗಳೂರಿಗೆ ಹೊರಟಿದ್ದರಂತೆ.

ಸುಳ್ಯ ಜ್ಯೋತಿ ಸರ್ಕಲ್ ಮುಂಭಾಗ ತಲೆ ತಿರುಗಿ ಬಿದ್ದಿದ್ದ ಇವರನ್ನು ಗಮನಿಸಿದ ಸ್ಥಳೀಯ ಕೆಲವು ಯುವಕರು ಇವರಿಗೆ ಊಟ ತಂದು ಕೊಟ್ಟು, ಹಣ ಸಹಾಯ ಮಾಡಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಸುಳ್ಯ ಎಸ್ಐ ಹರೀಶ್, ನಾರಾಯಣ ರೈಯವರನ್ನು ಠಾಣೆಗೆ ಕರೆದುಕೊಂಡು ಹೋಗಿ ಮಂಗಳೂರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.