ಮಂಗಳೂರು: ಚಾಮರಾಜನಗರ ದುರಂತದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಆಮ್ಲಜನಕದ ವ್ಯವಸ್ಥೆ ಮೇಲೆ ತೀವ್ರ ನಿಗಾ ಇಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜು ಆಸ್ಪತ್ರೆಗಳು, ಹಲವು ಖಾಸಗಿ ಆಸ್ಪತ್ರೆಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 4,500 ಬೆಡ್ಗಳನ್ನು ಕೋವಿಡ್ ರೋಗಿಗಳಿಗೆ ಎಂದು ಮೀಸಲಿಡಲಾಗಿದೆ. ಇದರಲ್ಲಿ 1126 ಕೊರೊನಾ ರೋಗಿಗಳು ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಪೈಕಿ 6ರಲ್ಲಿ ಆಸ್ಪತ್ರೆಯಲ್ಲೇ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ಇದೆ. ಅದಕ್ಕೆ ಬೇಕಾದ ಲಿಕ್ವಿಡ್ ಆಕ್ಸಿಜನ್ ಕೂಡ ನಿರಂತರವಾಗಿ ಬರ್ತಾ ಇದೆ. ಜಿಲ್ಲೆಗೆ ಬೇಕಾದ ಆಕ್ಸಿಜನ್ ಬಳ್ಳಾರಿ ಮತ್ತು ಕೇರಳದ ಪಾಲಕ್ಕಾಡ್ನಿಂದ ಸರಬರಾಜಾಗುತ್ತಿದೆ. 80 ಶೇಕಡಾದಷ್ಟು ಬಳ್ಳಾರಿ ಮತ್ತು 10 ಶೇಕಡಾದಷ್ಟು ಪಾಲಕ್ಕಾಡ್ ಜಿಲ್ಲೆಯಿಂದ ಬರುತ್ತಿದ್ದು, 10 ಶೇಕಡಾದಷ್ಟು ಜಿಲ್ಲೆಯಲ್ಲೇ ಉತ್ಪಾದನೆ ಆಗುತ್ತಿದೆ.
ಕೇರಳದ ಪಾಲಕ್ಕಾಡ್ನಿಂದ ಸರಬರಾಜು ವ್ಯತ್ಯಯವಾಗಿದ್ದರಿಂದ ಬಳ್ಳಾರಿಯಿಂದ ಹೆಚ್ಚುವರಿ ಆಕ್ಸಿಜನ್ ತರಲಾಗುತ್ತಿದೆ. ಜಿಲ್ಲೆಯಲ್ಲಿ ಅಗತ್ಯಕ್ಕೆ ಬೇಕಾದಷ್ಟು ಆಕ್ಸಿಜನ್ ಸಂಗ್ರಹವಿದ್ದು, ಬೇಡಿಕೆಗೆ ತಕ್ಕಂತೆ ಸರಬರಾಜಾಗುತ್ತಿದೆ. ಕೇರಳದ ಪಾಲಕ್ಕಾಡ್ನಿಂದ ಪ್ರತಿ ದಿನಕ್ಕೆ ಬರುತ್ತಿದ್ದ 6 ಟನ್ ಆಕ್ಸಿಜನ್ ವ್ಯತ್ಯಯವಾಗಿರುವುದರಿಂದ ಅಷ್ಟು ಆಕ್ಸಿಜನ್ ಬಳ್ಳಾರಿಯಿಂದ ಬರುತ್ತಿದೆ.
ಪಾಲಕ್ಕಾಡ್ನಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಕೇರಳ ಸರ್ಕಾರ ಅಲ್ಲಿಗೆ ಮೀಸಲಿಟ್ಟಿರುವುದರಿಂದ ಈ ಸಮಸ್ಯೆಯಾಗಿದೆ. ಜಿಲ್ಲೆಗೆ ಸನಿಹವಾಗಿರುವುದರಿಂದ ಪಾಲಕ್ಕಾಡ್ನಿಂದಲೇ ಕೊಡುವಂತೆ ವ್ಯವಸ್ಥೆ ಮಾಡುವಂತೆ ಕೇರಳ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಸದ್ಯಕ್ಕೆ ಮೂರು ಕಡೆ ಆಕ್ಸಿಜನ್ ವಿತರಕರಿಂದ ಜಿಲ್ಲೆಗೆ ಬೇಕಾದ ಆಮ್ಲಜನಕ ಸಿಗ್ತಾ ಇದೆ.
ಎಂಆರ್ಪಿಎಲ್ನಿಂದ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಸಿದ್ದತೆ:
ಎಂಆರ್ಪಿಎಲ್ ಸಂಸ್ಥೆ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಸಿದ್ಧತೆ ಮಾಡುತ್ತಿದೆ. ಜಿಲ್ಲೆಯಲ್ಲಿ ಮುಂದೆ ಆಕ್ಸಿಜನ್ ಸಮಸ್ಯೆ ಅಗಬಾರದೆಂದು ಆಕ್ಸಿಜನ್ ತಯಾರಿಕಾ ಪ್ಲಾಂಟ್ ಆರಂಭಿಸಲಾಗುತ್ತಿದೆ. ಜೂನ್ನಲ್ಲಿ ಇದು ಕಾರ್ಯಾರಂಭ ಮಾಡಲಿದ್ದು, ಬಳಿಕ ಆಕ್ಸಿಜನ್ಗಾಗಿ ಬೇರೆ ಜಿಲ್ಲೆ ಅಥವಾ ಬೇರೆ ರಾಜ್ಯವನ್ನು ಅವಲಂಬಿಸಬೇಕಾಗಿಲ್ಲ. ಇದು ಪ್ರತಿ ನಿಮಿಷಕ್ಕೆ 930 ಲೀಟರ್ ಉತ್ಪಾದನೆ ಮಾಡಲಿದ್ದು, ವೆನ್ಲಾಕ್ ಆಸ್ಪತ್ರೆಗೆ ಬೇಕಾದಷ್ಟು ಲಭ್ಯವಾಗಲಿದೆ.
ಜಿಲ್ಲೆಯಲ್ಲಿ 7,883 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಇದರಲ್ಲಿ 1,126 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಉಳಿದವರು ಹೋಂ ಐಸೋಲೇಷನ್ನಲ್ಲಿದ್ದಾರೆ. ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಬೆಡ್ಗಳ ಕೊರತೆ ಇಲ್ಲದೇ ಇದ್ದು, ಮುಂದೆಯೂ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ವೆನ್ಲಾಕ್ನಲ್ಲಿ ವೆಂಟಿಲೇಟರ್ಗಳ ಸಂಖ್ಯೆ ಹೆಚ್ಚಳ:
ಜಿಲ್ಲೆಯಲ್ಲಿ ಆಸ್ಪತ್ರೆಯಲ್ಲಿರುವ ಶೇಕಡಾ 98ರಷ್ಟು ವೆಂಟಿಲೇಟರ್ಗಳು ಭರ್ತಿಯಾಗುತ್ತಲೇ ಇವೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ವೆಂಟಿಲೇಟರ್ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ತಾಲೂಕಿನ ಆಸ್ಪತ್ರೆಗಳಲ್ಲಿ ಇರುವ 45 ವೆಂಟಿಲೇಟರ್ಗಳು ಬಳಕೆಯಾಗದೇ ಇವೆ. ಅವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ವ್ಯವಸ್ಥೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.