ಮಂಗಳೂರು: ಶ್ರೀಲಂಕಾದ ಮಾಜಿ ಸ್ಪಿನ್ ಗಾರುಡಿಗ ಮುತ್ತಯ್ಯ ಮುರಳೀಧರನ್ ಬುಧವಾರ ದ.ಕ. ಜಿಲ್ಲೆಯ ಪುತ್ತೂರಿನ ನರಿಮೊಗರುವಿನಲ್ಲಿರುವ ಬಿಂದು ಕಂಪೆನಿಯ ಉತ್ಪಾದನ ಘಟಕಕ್ಕೆ ಭೇಟಿ ನೀಡಿ, ಕಂಪೆನಿಯ ಮುಖ್ಯಸ್ಥ ಸತ್ಯ ಶಂಕರ್ ಭಟ್ ಜೊತೆ ಮಾತುಕತೆ ನಡೆಸಿದರು.
ಮುತ್ತಯ್ಯ ಮುರಳೀಧರನ್ ಈಗಾಗಲೇ ಶ್ರೀಲಂಕಾದಲ್ಲಿ ಪಾನೀಯ ಉತ್ಪನ್ನಗಳ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ತಮ್ಮ ವ್ಯಾಪಾರ ವಿಸ್ತರಣೆಗಾಗಿ ಬಿಂದು ಕಂಪೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಇನ್ನು ಪಾನೀಯ ಉತ್ಪನ್ನಗಳ ಮೂಲಕ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ಬಿಂದು ಕಂಪೆನಿಯ ಉತ್ಪಾದನ ಘಟಕಕ್ಕೆ ಭೇಟಿ ನೀಡಿದ ಅವರು ವಿವಿಧ ಉತ್ಪನ್ನಗಳ ತಯಾರಿಕೆಗಳನ್ನು ವೀಕ್ಷಿಸಿದರು.
ಬಿಂದು ಕಂಪೆನಿ ಪ್ಯಾಕೇಜ್ಡ್ ನೀರುಗಳ ತಯಾರಿಕ ಘಟಕವನ್ನು ಹೊಂದಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದ ವಿವಿಧ ರೀತಿಯ ಪಾನೀಯಗಳನ್ನು ತಯಾರಿಸುತ್ತಿದೆ. ಅಲ್ಲದೆ ಹೈದರಾಬಾದಿನಲ್ಲಿಯೂ ತನ್ನ ತಯಾರಿಕಾ ಘಟಕವನ್ನು ಹೊಂದಿದೆ. ದ.ಕ.ಜಿಲ್ಲೆಯಲ್ಲಿ ಕೋಲಾ ಕಂಪೆನಿಯ ಉತ್ಪನ್ನಗಳನ್ನು ಹೊರತು ಪಡಿಸಿದರೆ, ಅತೀ ಹೆಚ್ಚು ಮಾರಾಟವಾಗುವುದು ಬಿಂದು ಕಂಪೆನಿಯ ಪಾನೀಯಗಳು ಎಂದು ಹೇಳಲಾಗುತ್ತದೆ. ಭಾರತೀಯ ಶೈಲಿಯಲ್ಲಿ ತಯಾರಿಸಲಾಗುವ ವಿವಿಧ ಮಾದರಿಯ ಜೀರಿಗೆ ಮತ್ತು ಶುಂಠಿಯ ಪಾನೀಯಗಳಿಗೆ ಹೊರ ದೇಶಗಳಲ್ಲೂ ಭಾರೀ ಬೇಡಿಕೆ ಇದೆ.