ಮಂಗಳೂರು/ಹಾಸನ: ರಾಜ್ಯದಲ್ಲಿ ಮುಂದಿನ ಸಲ ಅಧಿಕಾರಕ್ಕೆ ಬಂದರೆ ಉಚಿತ 200 ಯೂನಿಟ್ ವಿದ್ಯುತ್ ಮತ್ತು ಮನೆಯ ಮಹಿಳಾ ಯಜಮಾನಿಗೆ 2 ಸಾವಿರ ರೂಪಾಯಿ ಭತ್ಯೆ ನೀಡುವುದಾಗಿ ಕಾಂಗ್ರೆಸ್ನಿಂದ ಇತ್ತೀಚೆಗೆ ಘೋಷಣೆ ಮಾಡಲಾಗಿತ್ತು. ಅದರಂತೆ ಇವೆರಡು ಭರವಸೆ ಸೇರಿದಂತೆ ಹತ್ತು ಘೋಷಣೆಗಳನ್ನು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಘೋಷಣೆ ಮಾಡಿದ್ದಾರೆ.
ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಜಾ ಧ್ವನಿ ಯಾತ್ರೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಕರಾವಳಿಗೆ ಸೀಮಿತವಾಗಿ ಎಂಟು ಘೊಷಣೆಗಳು ಈ ಕೆಳಗಿನಂತಿವೆ.
1. ಕರಾವಳಿ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಕೋಸ್ಟಲ್ ಡೆವಲಪ್ ಮೆಂಟ್ ಅಥಾರಿಟಿ ಆರಂಭ. ಇದಕ್ಕೆ 2,500 ಕೋಟಿ ರೂ ಬಜೆಟ್.
2. ಮಂಗಳೂರನ್ನು ಮಾಹಿತಿ ತಂತ್ರಜ್ಞಾನದ ಮತ್ತೊಂದು ರಾಜಧಾನಿ ಮಾಡುವುದು. ಬೀಡಿ ಸುತ್ತಿ ಜೀವನ ಮಾಡುವ ಮಹಿಳೆಯರಿಗೆ ಪರ್ಯಾಯವಾಗಿ ಗಾರ್ಮೆಂಟ್ ಇಂಡಸ್ಟ್ರಿ ಹಬ್ ನಿರ್ಮಿಸುವುದು.
3. ಮೊಗವೀರರಿಗೆ 10 ಲಕ್ಷ ರೂ. ಗಳ ಇನ್ಸೂರೆನ್ಸ್ , 1 ಲಕ್ಷ ವರೆಗೆ ಬಡ್ಡಿ ರಹಿತ ಸಾಲ, ಬೋಟ್ ಖರೀದಿಗೆ 25 ಲಕ್ಷ ದವರೆಗೆ ಶೇ 25 ಸಬ್ಸಿಡಿ.
4. ಬಿಲ್ಲವ, ನಾಮಧಾರಿ, ಈಡಿಗ ಸಮುದಾಯದ ಅಭಿವೃದ್ಧಿಗೆ ನಾರಾಯಣಗುರು ಡೆವಲಪ್ಮೆಂಟ್ ಬೋರ್ಡ್ ಸ್ಥಾಪನೆ. ಇದಕ್ಕೆ 5 ವರ್ಷದಲ್ಲಿ 1,250 ಕೋಟಿ ರೂ ಬಜೆಟ್.
5. ಬಂಟರ ಅಭಿವೃದ್ಧಿಗೆ 1,250 ಕೋಟಿ ರೂ ಬಜೆಟ್.
6. ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ನೀಡುತ್ತಿದ್ದ 3,150 ಕೋಟಿ ರೂ ಅನುದಾನ ಬಿಜೆಪಿ ಸರ್ಕಾರ ನಿಲ್ಲಿಸಿದ್ದು, ಅದನ್ನು ಮತ್ತೆ ಆರಂಭಿಸುವುದು.
7. ಅಡಿಕೆ ಬೆಳೆಗೆ ನಷ್ಟ ಆಗದಂತೆ ಹಳದಿ ರೋಗ ತಡೆಗೆ 50 ಕೋಟಿ ರೂ ಮೀಸಲು ಇಡುವುದು.
8. ಕರಾವಳಿ ಪ್ರದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಪ್ರತಿ ಗ್ರಾಮ ಪಂಚಾಯತ್ನಲ್ಲಿ ಶ್ರೀ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಕೋಮು ಸೌಹಾರ್ದತಾ ಸಮಿತಿ ರಚಿಸಿ ಅನುದಾನ ನೀಡುವುದು.
ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಎಂದ ಸಿದ್ದರಾಮಯ್ಯ: ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ರಾಜ್ಯದಲ್ಲಿ ಲಂಚ ತಾಂಡವವಾಡುತ್ತಿದೆ. ನಾನು ಹಣಕಾಸು ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಯಾವುದೇ ಒಬ್ಬ ಕಂಟ್ರಾಕ್ಟರ್ ನಾನು 5 ಪೈಸೆ ಲಂಚ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ರೆ ರಾಜಕೀಯ ನಿವೃತ್ತಿ ಘೋಷಿಸಿ ಸನ್ಯಾಸತ್ವ ಸ್ವೀಕರಿಸುತ್ತೇನೆ" ಎಂದು ಹೇಳಿದರು. ಇದೇ ವೇಳೆ, ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿಯೂ ಅವರು ಘೋಷಿಸಿದರು.
"ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಇದು 40% ಸರ್ಕಾರ ಎಂದು ಕಂಟ್ರಾಕ್ಟರ್ ಅಸೋಸಿಯೇಶನ್ ಆಪಾದಿಸಿದೆ. ಭ್ರಷ್ಟಾಚಾರದಿಂದ ಕಂಟ್ರಾಕ್ಟ್ದಾರರ ಆತ್ಮಹತ್ಯೆ ಪ್ರಕರಣಗಳು ನಡೆದಿದೆ" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಮುಂದಿನ ಅಧಿಕಾರವಧಿಯಲ್ಲಿ ಮಾಡುವ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ. ಕೇವಲ ಘೋಷಣೆ ಮಾತ್ರ ಮಾಡುವುದಿಲ್ಲ, ಅದಕ್ಕೆ ಬೇಕಾದ ಹಣಕಾಸಿನ ಬಗ್ಗೆಯೂ ಚರ್ಚೆ ನಡೆಸಿ ಭರವಸೆ ನೀಡಲಾಗುತ್ತಿದೆ. ಬಿಜೆಪಿ 2018ರ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ಜನರ ಮುಂದೆ ಇಟ್ಟಿತ್ತು. ಆದರೆ ಅದರಲ್ಲಿ 50 ಘೋಷಣೆಗಳನ್ನು ಮಾತ್ರ ಈಡೇರಿಸಿದೆ. ಆ ಸರ್ಕಾರಕ್ಕೆ ತಾನು ಘೋಷಣೆ ಮಾಡಿದ ಶೇ 10ರಷ್ಟು ಭರವಸೆಯನ್ನೂ ಈಡೇರಿಸಲು ಆಗಿಲ್ಲ. ಆದರೆ, ಕಾಂಗ್ರೆಸ್ ಪಕ್ಷ 2013ರಲ್ಲಿ 165 ಭರವಸೆಗಳನ್ನು ನೀಡಿತ್ತು. ಅದರಲ್ಲಿ 158ನ್ನು ಈಡೇರಿಸಿದ್ದೇವೆ. ಅಷ್ಟು ಮಾತ್ರವಲ್ಲದೇ, ಇಂದಿರಾ ಕ್ಯಾಂಟೀನ್, ಸಾಲ ಮನ್ನಾ, ವಿದ್ಯಾಸಿರಿಯಂತಹ 30 ಹೆಚ್ಚುವರಿ ಯೋಜನೆಗಳನ್ನು ಕೊಟ್ಟಿದ್ದೇವೆ" ಎಂದರು.
"ಬಿಜೆಪಿ ಅಂದ್ರೆ ಸುಳ್ಳು ಹೇಳಿ ಜನರನ್ನು ಮರಳು ಮಾಡುವ ಪಕ್ಷ, ಸುಳ್ಳಿನ ಫ್ಯಾಕ್ಟರಿ. ರೈತರ ಸಾಲ 1 ಲಕ್ಷ ದವರೆಗೆ ಮನ್ನಾ ಮಾಡುತ್ತೇವೆ ಎಂದು ಹೇಳಿ ಅದನ್ನು ಈಡೇರಿಸಿಲ್ಲ. ಅದೇ ರೀತಿ ನೀರಾವರಿಗೆ 1ಲಕ್ಷದ 50 ಸಾವಿರ ಕೋಟಿ ಖರ್ಚು ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, 4 ವರ್ಷದಲ್ಲಿ 45 ರಿಂದ 50 ಸಾವಿರದ ವರೆಗೆ ಮಾತ್ರ ಖರ್ಚು ಮಾಡಿದ್ದಾರೆ. ಇದು ಜನರಿಗೆ ಮಾಡಿದ ದ್ರೋಹ. ಬಿಜೆಪಿಯವರು ವಚನ ಭ್ರಷ್ಟರಾಗಿದ್ದಾರೆ. ಸಿಎಂ ಬೊಮ್ಮಾಯಿ ಅವರು ಮಾತೆತ್ತಿದರೆ ಧಮ್ಮು, ತಾಕತ್ತು ಬಗ್ಗೆ ಮಾತನಾಡುತ್ತಾರೆ. ಅವರಿಗೆ ಧಮ್ಮು ತಾಕತ್ತು ಇದ್ದರೆ ಅವರು ಈಡೇರಿಸಿದ ಭರವಸೆ ಮತ್ತು ನಾವು ಈಡೇರಿಸಿದ ಭರವಸೆ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಅದಕ್ಕೆ ಅವರಿಗೆ ತಾಕತ್ತು ಇಲ್ಲ" ಎಂದು ಟೀಕಿಸಿದರು.
"ಕರಾವಳಿಯಲ್ಲಿ ಬೆಂಕಿ ಹಚ್ಚಿದ್ದಾರೆ. ದ್ವೇಷದ ಮಾತು ಆರಂಭಿಸಿದ್ದಾರೆ. ಹಿಂದುಳಿದ ವರ್ಗದ ಯುವಕರನ್ನು ದಾರಿ ತಪ್ಪಿಸಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಯುವಕರಿಗೆ ಅಫೀಮು ತುಂಬಿಸಿ ಮತಾಂಧರನ್ನಾಗಿ ಮಾಡುತ್ತಿದ್ದಾರೆ. ಇದು ದೇಶಕ್ಕೆ ಮಾರಕ. ಆರ್ಎಸ್ಎಸ್ನವರು ಮನುವಾದಿಗಳು. ಅವರು ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎಂದು ಹೇಳುತ್ತಿದ್ದಾರೆ. ಇದು ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವುದು ನಿಜವಾದ ಜನಸೇವೆ" ಎಂದರು.
"ನನ್ನನ್ನು ಹಿಂದೂ ವಿರೋಧಿ ಎಂದು ಆರ್ಎಸ್ಎಸ್ನವರು ಬ್ರಾಂಡ್ ಮಾಡಿದರು. ಆರ್ಎಸ್ಎಸ್ ಪ್ರಕಾರ, ಹಿಂದೂ ಎಂದರೆ ಮಹಾತ್ಮ ಗಾಂಧೀಜಿಯನ್ನು ಕೊಂದ ಗೋಡ್ಸೆ. ದೇಶದಲ್ಲಿ ಅತೀ ಹೆಚ್ಚು ಸುಳ್ಳು ಹೇಳಿದ ಪ್ರಧಾನಮಂತ್ರಿ ಅಂದ್ರೆ ನರೇಂದ್ರ ಮೋದಿ. 15 ಲಕ್ಷ ರೂ. ಕೊಡುತ್ತೇನೆ ಎಂದವರು 1 ರೂ. ಕೂಡ ಕೊಡಲಿಲ್ಲ. ದೇಶದ ಸಂಪತ್ತು 5 ಟ್ರಿಲಿಯನ್ ಡಾಲರ್ ಮಾಡುತ್ತೇವೆ ಎಂದಿದ್ದಾರೆ. 3 ಟ್ರಿಲಿಯನ್ ಕೂಡ ಆಗಿಲ್ಲ" ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, "ನಮಗೆ ಅಧಿಕಾರಕ್ಕೆ ಬರುವುದೇ ಮುಖ್ಯವಲ್ಲ. ಈ ರಾಜ್ಯದ ಜನರನ್ನು ಸಂತೋಷವಾಗಿಡಬೇಕು. ಕಾಂಗ್ರೆಸ್ನ ಇತಿಹಾಸ ನುಡಿದಂತೆ ನಡೆಯುವುದು. ಈ ಬಾರಿ 135 ರಿಂದ 140 ಸ್ಥಾನ ಕಾಂಗ್ರೆಸ್ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ. ನಾನು ಇಂಧನ ಸಚಿವನಾಗಿದ್ದಾಗ 10 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಇತ್ತು. ಅದನ್ನು 20 ಸಾವಿರ ಮೆಗಾ ವ್ಯಾಟ್ ಉತ್ಪಾದನೆಗೆ ಹೆಚ್ಚಿಸಿದ್ದೇನೆ. 10 ಸಾವಿರ ಮೆಗಾ ವ್ಯಾಟ್ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇನೆ. ಅದಕ್ಕೆ ಪ್ರಧಾನಮಂತ್ರಿಗಳೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಸಚಿವ ಸುನಿಲ್ ಕುಮಾರ್ ಹಿಂದಿನ ದಾಖಲೆ ನೋಡಿ ಮಾತಾಡಲಿ" ಎಂದು ತಿಳಿಸಿದರು.
ಇದನ್ನೂ ಓದಿ: ನನಗೆ ಹೊಗಳಿಕೆ ಅಂದ್ರೆ ಭಯ, ತೆಗಳಿಕೆಯನ್ನ ಮೆಟ್ಟಿಲು ಮಾಡಿಕೊಳ್ಳುವೆ: ಸಿಎಂ ಬಸವರಾಜ ಬೊಮ್ಮಾಯಿ
ಸದಾನಂದ ಗೌಡರ ಆಪ್ತ ಸೇರಿ ಹಲವರು ಕೈ ಸೇರ್ಪಡೆ: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಆಪ್ತ ಉದ್ಯಮಿ ಅಶೋಕ್ ಶೆಟ್ಟಿ ಕೋಡಿಂಬಾಳ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು. ಇದೇ ವೇಳೆ ಮಾಜಿ ತಾ.ಪಂ ಸದಸ್ಯೆ ಫಕೀರ ಅವರ ಪತ್ನಿ ಧರಣಿ ಪಕೀರ ಮತ್ತು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗ್ಡೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಸೇರ್ಪಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜನಾರ್ಧನ ಪೂಜಾರಿ ಭಾಗಿ: ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಭಾಗಿಯಾಗಿದ್ದು ಗಮನ ಸೆಳೆಯಿತು. ಪೂಜಾರಿ ಅವರು ವೇದಿಕೆಗೆ ಬರುವ ಸಂದರ್ಭದಲ್ಲಿ ಅವರಿಗೆ ನಾಯಕರು, ಕಾರ್ಯಕರ್ತರು ಗೌರವ ಸೂಚಿಸಿದರು. ಕಾರ್ಯಕ್ರಮಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಜಿ.ಪರಮೆಶ್ವರ್, ಪ್ರತಿಪಕ್ಷ ನಾಯಕ ಯು.ಟಿ.ಖಾದರ್, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೋ, ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯಗೆ ರಾಜಕೀಯ ನಿವೃತ್ತಿ ಪಡೆಯುವ ಸ್ಥಿತಿ ಬರಲಿ: ಸಿಎಂ ಬೊಮ್ಮಾಯಿ ವ್ಯಂಗ್ಯ
ಜೆಡಿಎಸ್‌ನವರು ಜನರಿಗೆ ಏನೂ ಮಾಡಲಿಲ್ಲ: ಹಾಸನದಲ್ಲಿ ನಿನ್ನೆ ನಡೆದ ಪ್ರಜಾ ಧ್ವನಿ ಯಾತ್ರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಕಳೆದ ಬಾರಿ ಹಾಸನದಲ್ಲಿ ನಮ್ಮ ಪಕ್ಷ ಜೀರೋ ಇತ್ತು. ಈ ಬಾರಿ ಐದು ಕ್ಷೇತ್ರಗಳನ್ನಾದರೂ ಗೆಲ್ಲಲೇ ಬೇಕು. ಅಧಿಕಾರದಲ್ಲಿದ್ದ ಜೆಡಿಎಸ್‌ನವರು ಜನರಿಗೆ ಏನೂ ಮಾಡದೆ ಈಗ ತಮಟೆ ಹೊಡೆದುಕೊಂಡು ಪಂಚಯಾತ್ರೆ ಮಾಡುತ್ತಿದ್ದಾರೆ. ದಯಮಾಡಿ ಈ ಬಾರಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ" ಎಂದರು.
ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: "ನಾನು ಮುಖ್ಯಮಂತ್ರಿ ಆಗಿದ್ದಾಗ 7 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದ್ದೆ. ಈಗ ಬಿಜೆಪಿಯವರು 5 ಕೆಜಿಯನ್ನು ಕೊಡುತ್ತಿದ್ದಾರೆ. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ. ಕುಟುಂಬದ ಮಹಿಳಾ ಯಜಮಾನಿಗೆ ತಿಂಗಳಿಗೆ 2000 ನೀಡುತ್ತೇವೆ. ಕೊಟ್ಟ ಮಾತನ್ನು ಯಾವತ್ತೂ ತಪ್ಪಿ ನಡೆಯುವುದಿಲ್ಲ, ನಾವು ಕೊಟ್ಟ ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ" ಎಂದು ಗಂಭೀರವಾಗಿ ನುಡಿದರು.