ಮಂಗಳೂರು: ನಗರದ ಬಸ್ಸಿನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಮಾಸುವ ಮುನ್ನವೇ ರೈಲಿನಲ್ಲಿ ಯುವತಿಗೆ ಕಿರುಕುಳ ನೀಡಿರುವ ಪ್ರಕರಣ ಬಯಲಿಗೆ ಬಂದಿದೆ.
ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಯುವತಿ ಕಾನೂನು ವಿದ್ಯಾರ್ಥಿನಿಯಾಗಿದ್ದು, ಈಕೆ ಕಳೆದ ಶುಕ್ರವಾರ ಬೆಳ್ಳಂಬೆಳಗ್ಗೆ ಕೇರಳ ರಾಜ್ಯದ ವರ್ಕಳದಿಂದ ರೈಲು ಪ್ರಯಾಣದ ಮೂಲಕ ಮಂಗಳೂರು ಕಡೆಗೆ ಆಗಮಿಸುತ್ತಿದ್ದರು. ನಸುಕಿನ ಜಾವ ಇದ್ದ ಕಾರಣ ಆಕೆ ರೈಲಿನಲ್ಲಿ ನಿದ್ರಿಸುತ್ತಿದ್ದಳು. ಈ ಸಂದರ್ಭ ಸಹ ಪ್ರಯಾಣಿಕನಾದ ಆರೋಪಿ ಆಕೆಯ ಮೈಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ.
ತಕ್ಷಣ ಆತನ ವಿಡಿಯೋ ಮಾಡಿದ ಯುವತಿ ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಬಳಿಕ ಇದು ವೈರಲ್ ಆಗಿದ್ದು, ಅನೇಕರು ಯುವತಿಯ ಬೆಂಬಲಕ್ಕೆ ಬಂದಿದ್ದಾರೆ. ಅಲ್ಲದೆ ಈ ಬಗ್ಗೆ ಪೊಲೀಸ್ ದೂರು ಕೂಡಾ ನೀಡಲಾಗಿತ್ತು. ದೂರು ನೀಡಿ ನಾಲ್ಕು ದಿನಗಳ ಬಳಿಕ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
![Sexual harassment, Sexual harassment to young woman, Sexual harassment to young woman in moving train, Mangalore news, Mangalore crime news, ಲೈಂಗಿಕ ಕಿರುಕುಳ, ಯುವತಿಗೆ ಲೈಂಗಿಕ ಕಿರುಕುಳ, ಚಲಿಸುತ್ತಿರುವ ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಮಂಗಳೂರು ಸುದ್ದಿ, ಮಂಗಳೂರು ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/kn-mng-02-sexualized-harassment-script-ka10015_23022021223744_2302f_1614100064_370.jpg)
ಈ ಬಗ್ಗೆ ವಿದ್ಯಾರ್ಥಿ ನಾಯಕ ಸುಹಾನ್ ಆಳ್ವ ಮಾತನಾಡಿ, ಯುವತಿಗೆ ಆಗಿರುವ ಅನ್ಯಾಯದ ಬಗ್ಗೆ ನಾವು ದನಿ ಎತ್ತಿದ್ದು, ಈ ಬಗ್ಗೆ ತಕ್ಷಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಇದೀಗ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಎರಡು ಪ್ರಕರಣಗಳು ನಡೆದಿದ್ದು, ಮಹಿಳೆಯರಿಗೆ ನಡೆಯುತ್ತಿರುವ ಈ ರೀತಿಯ ದೌರ್ಜನ್ಯದ ವಿರುದ್ಧು ದನಿ ಎತ್ತುತ್ತೇವೆ ಎಂದು ಹೇಳಿದರು.