ಬೆಳ್ತಂಗಡಿ (ದಕ್ಷಿಣ ಕನ್ನಡ): ಕನ್ಯಾಡಿ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ಆಂಗ್ಲ ಮಾಧ್ಯಮ ವಿದ್ಯಾಲಯದಲ್ಲಿ ಎಲ್‌ಕೆಜಿ, ಯುಕೆಜಿಯಿಂದ ಎಸ್‌ಎಸ್‌ಎಲ್‌ಸಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಆದರೆ ಕೋವಿಡ್ನಿಂದಾಗಿ ಶಾಲೆಯನ್ನು ವರ್ಷದ ಮಟ್ಟಿಗೆ ಸ್ಥಗಿತಗೊಳಿಸಲು ಚಿಂತಿಸಲಾಗಿದೆ.
ಈ ಕುರಿತು ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪ್ರಕಟಣೆ ಹೊರಡಿಸಿದ್ದು, ಶಾಲಾ ಶಿಕ್ಷಣದ ವಿಚಾರವಾಗಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರ ಅಭಿಪ್ರಾಯಗಳನ್ನು ಕಲೆ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯಲ್ಲಿಯೂ 12 ವರ್ಷದೊಳಗಿನ ಮಕ್ಕಳು ಇರುವುದರಿಂದ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣದ ಹಿತದೃಷ್ಟಿಯಿಂದ ಒಂದು ವರ್ಷದ ಅವಧಿಗೆ ಶಿಕ್ಷಣವನ್ನು ಸ್ಥಗಿತಗೊಳಿಸಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿಲಯದಲ್ಲಿ ಸುಮಾರು 200ಕ್ಕೂ ಅಧಿಕ 12 ವರ್ಷದೊಳಗಿನ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಶಿಕ್ಷಣ ಪಡೆದುಕೊಳ್ಳುತ್ತಿದ್ದರು. ಶಾಲೆಯನ್ನು ಸ್ಥಗಿತಗೊಳಿಸುವ ಕುರಿತು ಸಂಬಂಧಪಟ್ಟ ಶಿಕ್ಷಣ ಸಚಿವರು ಹಾಗೂ ಇಲಾಖೆಗೆ ಮಾಹಿತಿ ನೀಡಲಾಗಿದೆ. ಕೊರೊನಾ ಮಹಾಮಾರಿ ಕಾಯಿಲೆ ಸಂಪೂರ್ಣ ನಿಯಂತ್ರಣವಾದ ಬಳಿಕ ಶಾಲೆ ಪ್ರಾರಂಭಿಸಲು ಶ್ರೀರಾಮ ಕ್ಷೇತ್ರ ನಿರ್ಧರಿಸಿದೆ.