ಬಂಟ್ವಾಳ (ದಕ್ಷಿಣಕನ್ನಡ): ಶಾಲೆಗೆ ನುಗ್ಗಿದ ಕೆಲ ಕಿಡಿಗೇಡಿಗಳು ಇಲ್ಲಿನ ಸ್ವತ್ತುಗಳಿಗೆ ಹಾನಿ ಮಾಡಿ, ಗೋಡೆಯ ಮೇಲೆ ಅಶ್ಲೀಲ ಬರಹಗಳನ್ನು ಬರೆದಿರುವ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಕಿಡಿಗೇಡಿಗಳು ಶಾಲೆಯ ಎಲ್ಲ ತರಗತಿ ಕೊಠಡಿಯ ಬಾಗಿಲ ಬಳಿ ಮೊಟ್ಟೆ ಒಡೆದಿದ್ದಾರೆ. ಅಲ್ಲದೇ ಒಂದು ಕೊಠಡಿಯ ಕಿಟಕಿಯ ಗಾಜನ್ನು ಒಡೆದಿರುವುದಲ್ಲದೇ, ಮಕ್ಕಳ ಸೃಜನಾತ್ಮಕತೆಗೆ ಒದಗಿಸಿದ ಸೂಚನಾ ಫಲಕದ ಗಾಜು, ಜೊತೆಗೆ ಶಾಲೆಯ ಟ್ಯೂಬ್ ಲೈಟ್ಗಳನ್ನು ಒಡೆದು ಹಾಕಿದ್ದಾರೆ. ಪ್ರಾಥಮಿಕ ಶಾಲೆಯ ಗೇಟ್ ಮತ್ತು ಅಡುಗೆ ಕೋಣೆಯ ಬಾಗಿಲಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ವಿದ್ಯಾರ್ಥಿಗಳು ಬಿಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಹರಿದು ಹಾಕಿದ್ದಾರೆ. ಅಲ್ಲದೆ ಶಾಲೆ ಗೋಡೆ ಮೇಲೆ ಅಶ್ಲೀಲ ಬರಹಗಳನ್ನು ಬರೆದಿದ್ದಾರೆ.
ಇದರಿಂದಾಗಿ ಶಾಲೆಯ ದೈನಂದಿನ ತರಗತಿಗೆ ತೊಂದರೆ ಉಂಟಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶಾಲಾ ಮೈದಾನವನ್ನು ಅಕ್ರಮವಾಗಿ ಪ್ರವೇಶಿಸಿರುವ ತಂಡ ಕ್ರಿಕೆಟ್ ಆಡಿ ಬಳಿಕ ಈ ಕೃತ್ಯ ಎಸಗಿರಬಹುದು ಎಂದು ಸಂಶಯಿಸಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಜ್ಪೆಯಲ್ಲಿ ಯುವಕನ ಮೇಲೆ ಡ್ರಾಗರ್ ದಾಳಿ : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಯುವಕರ ತಂಡವೊಂದು ಡ್ರ್ಯಾಗರ್ನಿಂದ ಹಲ್ಲೆ ನಡೆಸಿರುವ ಘಟನೆ ಮಂಗಳೂರು ನಗರದ ಹೊರವಲಯದಲ್ಲಿರುವ ಬಜ್ಪೆಯಲ್ಲಿ ನಡೆದಿದೆ. ದಾಳಿಯಲ್ಲಿ ಕರಂಬಾರು ಶಾಂತಿಗುಡ್ಡೆ ನಿವಾಸಿ ಅಬ್ದುಲ್ ಸಫ್ವಾನ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬಕ್ಪೆ ಕಳವಾರು ನಿವಾಸಿ ಪ್ರಶಾಂತ್ ಯಾನೆ ಪಚ್ಚು, ಧನ್ರಾಜ್, ಯಜ್ಞೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಅಬ್ದುಲ್ ಸಫ್ವಾನ್ ಮತ್ತು ಮುಹಮ್ಮದ್ ಸಫ್ವಾನ್ ಎಂಬವರು ಕರಂಬಾರಿನಿಂದ ಬಜ್ಪೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳ ತಂಡ ಏಕಾಏಕಿ ಅಡ್ಡಗಟ್ಟಿ ಹಲ್ಲೆ ನಡೆಸಿದೆ. ಬಳಿಕ ಡ್ರ್ಯಾಗರ್ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಆಗಮಿಸಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಅಬ್ದುಲ್ ಸಫ್ವಾನ್ನಿಂದ ಮಾಹಿತಿ ಪಡೆದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆ: ಮಳೆಗೆ ಕುಸಿದುಬಿತ್ತು ಶತಮಾನದ ಸರ್ಕಾರಿ ಶಾಲೆಯ ಮೇಲ್ಛಾವಣಿ