ನೆಲ್ಯಾಡಿ: ಗ್ರಾಮೀಣ ಭಾಗದ ರಬ್ಬರ್ ಬೆಳೆಗಾರರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಖಾಸಗಿ ವ್ಯಾಪಾರಸ್ಥರಿಂದ ರಬ್ಬರ್ ಖರೀದಿ ಮಾಡಲು ಕ್ರಮ ಕೈಗೊಳ್ಳುವಂತೆ ಇಲ್ಲಿನ ಸಮಾನ ಮನಸ್ಕರ ವೇದಿಯ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ಮನವಿ ಸಲ್ಲಿಸಿದ್ದಾರೆ.

ಗುಡ್ಡ ಪ್ರದೇಶದಲ್ಲಿ ರಬ್ಬರ್ ಮಾತ್ರ ಬೆಳೆದು ಜೀವನ ನಡೆಸುತ್ತಿರುವ ಕುಟುಂಬಗಳು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ. ಇದೀಗ ರಬ್ಬರ್ ಬೆಲೆ ಕೂಡ ಸಂಪೂರ್ಣ ಕುಸಿದಿದೆ. ಮಾರುಕಟ್ಟೆಯಲ್ಲಿ ನೈಸರ್ಗಿಕ ರಬ್ಬರ್ ಖರೀದಿಸಲು ರಬ್ಬರ್ ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವರ್ಷವೂ ಅತಿವೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕ ರಬ್ಬರ್ ಬೆಳೆ ಹಾನಿಗೊಂಡು ರಬ್ಬರ್ ಕೃಷಿಕರು ಕಂಗಾಲಾಗಿದ್ದಾರೆ.

ಉಜಿರೆ ಸೊಸೈಟಿಯಲ್ಲಿ ಒಬ್ಬರಿಂದ 50 ಕೆಜಿ ರಬ್ಬರ್ ಖರೀದಿಸಲಾಗುತ್ತಿದೆ. ಆದರೆ ಎಲ್ಲಾ ಕೃಷಿಕರಿಗೆ ಈ ಸವಲತ್ತು ಸಿಗುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ಗಮನಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.