ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನದಲ್ಲಿ ಅಪರೂಪದ 2 ರೆಟಿಕ್ಯುಲೇಟೆಡ್ ಹೆಬ್ಬಾವು 50 ಮೊಟ್ಟೆಗಳನ್ನಿಟ್ಟು ಕಾವು ನೀಡುತ್ತಿವೆ.
ರೆಟಿಕ್ಯುಲೇಟೆಡ್ ಹೆಬ್ಬಾವು ವಿಶ್ವದ ಅತೀ ಉದ್ದದ ಹಾವು ಎಂದು ಪರಿಗಣಿಸಲ್ಪಟ್ಟಿದೆ. ಈ ಹಾವುಗಳು 30 ಅಡಿಗಳಷ್ಟು ಉದ್ದ ಬೆಳೆಯುತ್ತದೆ. ರೆಟಿಕ್ಯುಲೇಟೆಡ್ ಹೆಬ್ಬಾವುಗಳು ಈ ಭೂಪ್ರದೇಶದಲ್ಲಿ ಅಪರೂಪದ ಹಾವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇವುಗಳು ಹೆಚ್ಚಾಗಿ ಕಾಣಸಿಗುತ್ತವೆ.
5 ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನು ಐದು ವರ್ಷಗಳ ಹಿಂದೆ ಚೆನ್ನೈನಿಂದ ತರಿಸಲಾಗಿತ್ತು. ಇದರಲ್ಲಿ ಕೆಲವು ಈ ಹಿಂದೆ ಮೊಟ್ಟೆಯಿಟ್ಟು ಮರಿಗಳಾಗಿದ್ದರೆ, ಇದೀಗ 2 ರೆಟಿಕ್ಯುಲೇಟೆಡ್ ಹೆಬ್ಬಾವುಗಳು 50 ಮೊಟ್ಟೆಗಳನ್ನಿಟ್ಟಿವೆ. ಮೊಟ್ಟೆಗಳಿಗೆ ತಾಯಿ ಹೆಬ್ಬಾವು ಕಾವು ಕೊಡುತ್ತಿದೆ. ಇನ್ನೆರಡು ದಿನಗಳೊಳಗೆ ಮೊಟ್ಟೆಯೊಡೆದು ಮರಿಗಳು ಹೊರಬರಲಿವೆ.
ಇದನ್ನೂ ಓದಿ: ಅಪ್ರಾಪ್ತ ಮಗನಿಗೆ ವಾಹನ ಕೊಟ್ಟ ತಾಯಿ.. 25,500 ರೂ ದಂಡ ವಿಧಿಸಿದ ನ್ಯಾಯಾಲಯ
ರೆಟಿಕ್ಯುಲೇಟೆಡ್ ಹೆಬ್ಬಾವುಗಳು ಅಪರೂಪವಾಗಿರುವುದರಿಂದ ಇವುಗಳ ಮರಿಗಳನ್ನು ಕಾಡಿಗೆ ಬಿಡಲಾಗುವುದಿಲ್ಲ. ಅಗತ್ಯವಿರುವ ಇತರ ಪ್ರಾಣಿ ಸಂಗ್ರಹಾಲಯಗಳಿಗೆ ಪ್ರಾಣಿ ವಿನಿಮಯ ಯೋಜನೆಯಡಿ ನೀಡಲಾಗುತ್ತದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.